ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲ್ಗಾ, ಪೀಟರ್‌ಗೆ ಸಾಹಿತ್ಯ ನೊಬೆಲ್‌

Last Updated 10 ಅಕ್ಟೋಬರ್ 2019, 19:42 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಪೋಲೆಂಡ್‌ನ ಬರಹಗಾರ್ತಿ ಓಲ್ಗಾ ಟೊಕಾರ್‌ಝುಕ್‌ (2018) ಮತ್ತು ಆಸ್ಟ್ರಿಯಾದ ನಾಟಕಕಾರ ಪೀಟರ್‌ ಹಂಡ್ಕೆ (2019) ಅವರು ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 9 ದಶಲಕ್ಷ ಕ್ರೋನಾರ್‌ (ಸುಮಾರು ₹ 6.5 ಕೋಟಿ) ನಗದನ್ನು ಒಳಗೊಂಡಿದೆ.

ಓಲ್ಗಾ ಅವರ ಬರಹಗಳಲ್ಲಿನ ಕಾಲ್ಪನಿಕತೆ ಮತ್ತು ಸಮಗ್ರತೆಯೊಂದಿಗೆ ಗಡಿಗಳನ್ನು ಮೀರಿದ ಜೀವನ ದೃಷ್ಟಿಕೋನವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಅವರ ಕೃತಿಗಳಲ್ಲಿ ಪಾತ್ರಗಳು ಮತ್ತು ಗುಣಲಕ್ಷಣಗಳ ಮೂಲಕ ಬಹುವರ್ಣದ ಜಗತ್ತೊಂದು ನಿರಂತರವಾಗಿ ಚಲಿಸುತ್ತಿರುತ್ತದೆ. ಭಾಷೆಯೂ ನಿಖರವಾಗಿದ್ದು ಕಾವ್ಯಾತ್ಮಕವಾಗಿದೆ ಎಂದು ಅಕಾಡೆಮಿ ಹೇಳಿದೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಿಂದಾಗಿ ಕಳೆದ ವರ್ಷ ಸಾಹಿತ್ಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಿರಲಿಲ್ಲ. ಹೀಗಾಗಿ 2018ನೇ ಸಾಲಿನ ಪ್ರಶಸ್ತಿಯನ್ನೂ ಈ ವರ್ಷ ಘೋಷಿಸಲಾಗಿದೆ.

ಹಂಡ್ಕೆ ತಮ್ಮ ಬರಹದಲ್ಲಿ ಭಾಷಾ ಜಾಣ್ಮೆಯ ಮೂಲಕ ಮನುಷ್ಯನ ಜೀವನಾನುಭವದ ಪರಿಧಿಯನ್ನು ನಿರ್ದಿಷ್ಟವಾಗಿ ಗುರುತಿಸಿ ವಿವರಿಸಿರುವುದನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ. ಎರಡನೇ ಮಹಾಯುದ್ಧದ ಬಳಿಕ ಹಂಡ್ಕೆ ಅವರು ಪ್ರಭಾವಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಬರಹಗಳಲ್ಲಿ ಅನ್ವೇಷಣೆಯ ತೀವ್ರ ಆಸಕ್ತಿಯನ್ನು ಗುರುತಿಸಬಹುದು ಎಂದು ಅಕಾಡೆಮಿ ಹೇಳಿದೆ.

ಈವರೆಗೆ 116 ಮಂದಿ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದಿದ್ದು, ಓಲ್ಗಾ ಅವರು ಈ ಗೌರವಕ್ಕೆ ಪಾತ್ರರಾದ 15ನೇ ಮಹಿಳೆಯಾಗಿದ್ದಾರೆ.

ವಿವಾದಗಳ ನಡುವೆ ಅರಳಿದ ಬರಹಗಾರ
76ರ ಹರೆಯದ ಪೀಟರ್‌ ಹಂಡ್ಕೆ ಅವರು ಜರ್ಮನ್‌ ಭಾಷೆಯಲ್ಲಿ ಲವಲವಿಕೆಯಿಂದ ಬರೆಯುವ ಲೇಖಕ. ತಮ್ಮ ಕಡು ಟೀಕೆಗಳಿಂದ ಅವರು ಬಹಳಷ್ಟು ವಿರೋಧಗಳನ್ನು ಕಟ್ಟಿಕೊಂಡಿದ್ದರು. ನೊಬೆಲ್‌ ಪ್ರಶಸ್ತಿಯನ್ನೇ ಸ್ಥಗಿತಗೊಳಿಸಬೇಕು ಎಂಬ ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು.

1929ರಲ್ಲಿ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದ ಜರ್ಮನ್‌ನ ಥಾಮಸ್‌ ಮನ್‌ ಒಬ್ಬ ಕೆಟ್ಟ ಬರಹಗಾರ ಎಂಬ ಹೇಳಿಕೆ ನೀಡಿದ್ದರು.ನಾಟಕ, ಕಾದಂಬರಿ, ಕಾವ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ, ಅನುವಾದಕರಾಗಿ ಅವರು ಜನಮನ್ನಣೆ ಗಳಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೂ ಕೆಲಸ ಮಾಡಿದವರು.

'ಶಾರ್ಟ್‌ ಲೆಟರ್‌ , ಲಾಂಗ್‌ ಫೇರ್‌ವೆಲ್‌' ಎಂಬ ಕವನ ಸಂಕಲನ, 'ದ ಇನ್ನರ್‌ ವರ್ಲ್ಡ್‌ ಆಫ್‌ ಔಟರ್‌ ವರ್ಲ್ಡ್‌ ಆಫ್‌ ದ ಇನ್ನರ್‌ ವರ್ಲ್ಡ್‌', ‘ ಎ ಸಾರೊ ಬಿಯಾಂಡ್‌ ಡ್ರೀಮ್ಸ್‌ ' ಕೃತಿಗಳು ಪ್ರಮುಖವಾದವು.

1990ರಲ್ಲಿ ಅವರು ಸರ್ಬಿಯನ್ನರ ಪರವಾಗಿ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ನ್ಯಾಟೊ ಬೆಲ್‌ಗ್ರೇಡ್‌ ಮೇಲೆ ಮಾಡಿದ ಬಾಂಬ್‌ದಾಳಿಯನ್ನು ವಿರೋಧಿಸಿ 1999ರಲ್ಲಿ ಜರ್ಮನಿಯ ಪ್ರತಿಷ್ಠಿತ ಬೀಕ್‌ನರ್‌ ಪ್ರಶಸ್ತಿಯನ್ನು ವಾಪಸ್‌ ಮಾಡಿದರು.‌2005ರಲ್ಲಿ ಅವರು ಜರ್ಮನಿಯ ಹೆನ್ರಿಕ್‌ ಹೇನಿ ಪ್ರಶಸ್ತಿಯನ್ನೂ ನಿರಾಕರಿಸಿದರು. ಇಬ್ಸೆನ್‌ ಪ್ರಶಸ್ತಿ ಸ್ವೀಕರಿಸಲು ಅವರು ನಾರ್ವೆಗೆ ತೆರಳಿದಾಗ ‘ಫ್ಯಾಸಿಸ್ಟ್‌’ ಎಂಬ ಪ್ಲೆಕಾರ್ಡ್‌ ಹಿಡಿದು ಜನರು ಪ್ರತಿಭಟನೆ ನಡೆಸಿದರು.

ಓಲ್ಗಾ ಕೃತಿಗಳಲ್ಲಿ ಅನೂಹ್ಯ ವಿಶ್ವದ ಅನಾವರಣ
57ರ ಹರೆಯದ ಓಲ್ಗಾ ಅವರ ಕೃತಿಗಳು ‘ಬೆಸ್ಟ್‌ ಸೆಲ್ಲರ್‌’ ಎಂದೇ ಗುರುತಿಸಿಕೊಂಡಿವೆ. ಪರಿಸರವಾದಿ ಆಗಿರುವ ಅವರು ಪೋಲೆಂಡ್‌ನ ಬಲಪಂಥೀಯ ಸರ್ಕಾರದ ವಿರುದ್ಧ ಟೀಕೆಗಳನ್ನು ಸ್ಪಷ್ಟ ಮಾತುಗಳಲ್ಲಿ ವ್ಯಕ್ತಪಡಿಸಿದ್ದರು. 2015ರಲ್ಲಿ ಅವರು ಜೀವ ಬೆದರಿಕೆಗಳನ್ನೂ ಎದುರಿಸಿದ್ದು, ಪ್ರಕಾಶಕರು ಅವರಿಗೆ ಭದ್ರತೆ ಒದಗಿಸಿದ್ದರು.

ವಾರ್ಸಾವ್‌ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ಓದಿದ್ದ ಓಲ್ಗಾ ಅವರಿಗೆ ಜೋತಿಷ್ಯದಲ್ಲಿಯೂಆಸಕ್ತಿ. ಓದುಗರನ್ನು ಚಕಿತಗೊಳಿಸುವಂತೆ ಸನ್ನಿವೇಶಗಳನ್ನು ಜೋಡಿಸುತ್ತ ಅವರು ನಿಗೂಢ ಲೋಕವನ್ನೇ ತೆರೆದಿಡುತ್ತಾರೆ. ಅದೇ ವೇಳೆಗೆ ಮನುಷ್ಯನ ಸಂಕಟಗಳನ್ನೂ ಅನಾವರಣಗೊಳಿಸುತ್ತಾರೆ.

ಬರೋಬ್ಬರಿ 900 ಪುಟಗಳ ‘ದ ಬುಕ್ಸ್‌ ಆಫ್‌ ಜೇಕಬ್‌’ ಕೃತಿಯಲ್ಲಿ ಅವರು ಏಳು ರಾಷ್ಟ್ರಗಳು, ಮೂರು ಧರ್ಮಗಳು ಮತ್ತು ಐದು ಭಾಷೆಗಳನ್ನು ಅನ್ವೇಷಿಸುತ್ತ, ‘ಫ್ರಾಂಕಿಸಂ’ ಎಂಬ ಸಣ್ಣ ಸಮುದಾಯದ ಇತಿಹಾಸವನ್ನು ಬರೆದಿದ್ದಾರೆ. 2014ರಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ಪುಟಸಂಖ್ಯೆಯನ್ನು ಹೀಬ್ರೂ ಶೈಲಿಯಲ್ಲಿ ಅಂದರೆ ಹಿಮ್ಮುಖವಾಗಿ ಉಲ್ಲೇಖಿಸಲಾಗಿದೆ.

12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಓಲ್ಗಾ ಪೋಲೆಂಡ್‌ ನೈಕ್‌ ಲಿಟರರಿ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿದ್ದರು. ಕೆಟಲನ್‌, ಹಿಂದಿ, ಜಪಾನಿ ಸೇರಿದಂತೆ 25ಕ್ಕೂ ಹೆಚ್ಚು ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT