ಗುರುವಾರ , ನವೆಂಬರ್ 21, 2019
20 °C

‘ಮಾ’ಗೆ ಸ್ಪಂದಿಸಿ ಬಂದೂಕು ತ್ಯಜಿಸಿ ಮರಳಿ ಗೂಡಿಗೆ ಯುವಕರು : ಸೇನೆಗೆ ಮೆಚ್ಚುಗೆ

Published:
Updated:

ಶ್ರೀನಗರ: ಭಯೋತ್ಪಾದನೆ ಸಂಘಟನೆಗಳನ್ನು ತ್ಯಜಿಸಿ ತಮ್ಮದೇ ಬದುಕು ಕಟ್ಟಿಕೊಳ್ಳುವಂತೆ 50 ಕಾಶ್ಮೀರಿ ಯುವಕರನ್ನು ಮನವೊಲಿಸಿ ವಾಪಸ್‌ ತರುವಲ್ಲಿ ಸೇನೆ ಯಶಸ್ವಿಯಾಗಿದೆ.

‘ಮಾ’(ತಾಯಿ) ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಿಂದ ಈ ಯುವಕರು ಸಮಾಜದ ಮುಖ್ಯವಾಹಿನಿಗೆ ಸೇರಿದ್ದಾರೆ. ಲೆಫ್ಟಿನೆಂಟ್‌ ಜನರಲ್‌ ಕನ್ವಲ್‌ ಜೀತ್‌ ಸಿಂಗ್‌ ಧಿಲ್ಲೋನ್‌ ಅವರ ನಿರ್ದೇಶನದ ಮೇರೆಗೆ, ನಾಪತ್ತೆಯಾದ ಯುವಕರ ಕುಟುಂಬಗಳನ್ನು ಸಂಪರ್ಕಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಸೇನೆ ಕೈಗೊಂಡಿದ್ದ ಈ ಮಾನವೀಯ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಸೇನೆಯ ಬಗ್ಗೆ ಗೌರವವೂ ಹೆಚ್ಚಾಗಿದೆ.

‘ಒಳ್ಳೆಯ ಕಾರ್ಯ ಮಾಡಿ ಮತ್ತು ನಿಮ್ಮ ತಾಯಿ ಸೇವೆ ಮಾಡಿ. ಕುರ್‌–ಆನ್‌ನಲ್ಲಿ ತಾಯಿಯ ಮಹತ್ವದ ಬಗ್ಗೆ ಹೇಳಲಾಗಿದೆ. ದಾರಿ ತಪ್ಪಿದ ಯುವಕರನ್ನು ಮತ್ತೆ ಅವರ ಕುಟುಂಬದ ಜತೆ ಸೇರಿಸಲು ಇದೇ ಸಂದೇಶ ನನಗೆ ಪ್ರೇರಣೆಯಾಯಿತು’ ಎಂದು ಜನರಲ್‌ ಧಿಲ್ಲೋನ್‌ ತಿಳಿಸಿದ್ದಾರೆ.

‘ಯುವಕರು ಶರಣಾಗಲು ಅನುಕೂಲವಾಗುವಂತೆ ಎನ್‌ಕೌಂಟರ್‌ಗಳು ನಡೆಯುತ್ತಿದ್ದಾಗ ಮಧ್ಯದಲ್ಲೇ ನಿಲ್ಲಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಸ್ಥಳೀಯ ಉಗ್ರ ಸಿಲುಕಿದ್ದಾನೆ ಎನ್ನುವುದು ಗೊತ್ತಾದರೆ ಆತನ ತಾಯಿಯನ್ನು ಪತ್ತೆ ಮಾಡಿ ಇಬ್ಬರಿಗೂ ಮಾತನಾಡಲು ಅವಕಾಶ ಕಲ್ಪಿಸಿದ್ದೇವೆ’ ಎಂದು ಕಾರ್ಯಾಚರಣೆಯ ವಿವರ ನೀಡಿದ್ದಾರೆ.

‘ಯುವಕರು ಮತ್ತೆ ತಮ್ಮ ಮನೆಗೆ ಮರಳಿ ಸಂಭ್ರಮಿಸಿದ್ದಾರೆ. ಇದೇ ರೀತಿ ಸುಮಾರು 50 ಯುವಕರು ಈ ವರ್ಷ ವಾಪಸ್‌ ಹಿಂತಿರುಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘10 ದಿನದಲ್ಲೇ ಸಾವು’
‘ಭಯೋತ್ಪಾದನೆ ಸಂಘಟನೆ ಸೇರಿ ಶಸ್ತ್ರಾಸ್ತ್ರಗಳನ್ನು ಹಿಡಿದ 10 ದಿನಗಳಲ್ಲೇ ಶೇಕಡ 7ರಷ್ಟು ಯುವಕರು ಸಾವಿಗೀಡಾಗುತ್ತಾರೆ. ಒಂದು ತಿಂಗಳಲ್ಲಿ ಶೇಕಡ 9, ಮೂರು ತಿಂಗಳಲ್ಲಿ ಶೇಕಡ 17, ಆರು ತಿಂಗಳಲ್ಲಿ ಶೇಕಡ 36 ಮತ್ತು ಮೊದಲ ಒಂದು ವರ್ಷದಲ್ಲಿ ಶೇಕಡ 64 ಯುವಕರು ಸಾವಿಗೀಡಾಗುತ್ತಾರೆ’ ಎಂದು ಜನರಲ್‌ ಧಿಲೋನ್‌ ವಿವರಿಸಿದ್ದಾರೆ.

 ‘ಹೀಗಾಗಿ, ಶಸ್ತ್ರಗಳನ್ನು ಹಿಡಿದ ಯುವಕನ ಆಯಸ್ಸು ಒಂದು ವರ್ಷ ಮಾತ್ರ ಎನ್ನುವುದನ್ನು ಪೋಷಕರಿಗೆ ಮನವರಿಕೆ ಮಾಡಲಾಯಿತು. ಇದೇ ಅಂಶವನ್ನಿಟ್ಟುಕೊಂಡು ಕಾರ್ಯಾಚರಣೆ ಕೈಗೊಂಡಿದ್ದ ಕಾರಣ ಇಂದು ಅವರ ಮುಖದಲ್ಲಿ ನಗು ಕಾಣುತ್ತಿದ್ದೇವೆ’ ಎಂದು ಹೇಳಿದ್ದಾರೆ.

**
ಕೆಲವು ಎನ್‌ಕೌಂಟರ್‌ಗಳು ತಾಯಿ ಮತ್ತು ಮಗ ಇಬ್ಬರು ಅಪ್ಪಿಕೊಳ್ಳುವುದರೊಂದಿಗೆ ಮುಕ್ತಾಯವಾಗಿವೆ. ಯುವಕರನ್ನು ಸೇನೆ ರಕ್ಷಿಸಿ ಮಾರ್ಗದರ್ಶನ ನೀಡಿದೆ.
-ಕನ್ವಲ್‌ ಜೀತ್‌ ಸಿಂಗ್‌ ಧಿಲ್ಲೋನ್‌, ಲೆಫ್ಟಿನೆಂಟ್‌ ಜನರಲ್‌

ಪ್ರತಿಕ್ರಿಯಿಸಿ (+)