ಶುಕ್ರವಾರ, ಫೆಬ್ರವರಿ 21, 2020
18 °C

ಕ್ರಿಶ್ಚಿಯನ್ ಅಪ್ರಾಪ್ತೆಯ ಮತಾಂತರ-ಮದುವೆ: ಮಾನ್ಯ ಎಂದ ಪಾಕ್ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ: 14 ವರ್ಷದ ಪ್ರಾಯದ ಕ್ರಿಶ್ಚಿಯನ್ ಹುಡುಗಿಯನ್ನು ಅಪಹರಿಸಿ ಬಲವಂತದಿಂದ ಮತಾಂತರಗೊಳಿಸಿ ಮದುವೆಯಾದ ಪ್ರಕರಣವನ್ನು ಶರಿಯಾ ಕಾನೂನಿನ ಆಧಾರದಲ್ಲಿ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಮಾನ್ಯ ಮಾಡಿದ್ದು, ಬಾಲಕಿಯ ಪೋಷಕರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.

14 ವರ್ಷ ಪ್ರಾಯದ ಹುಮಾ ಎನ್ನುವವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಬ್ದುಲ್ ಜಬ್ಬಾರ್ ಎಂಬಾತ ಅಪಹರಿಸಿ ಮತಾಂತರಗೊಳಿಸಿದ್ದ ಹಾಗೂ ಬಲವಂತದಿಂದ ಮದುವೆಯಾಗಿದ್ದ .

ಪ್ರಕರಣದ ವಿಚಾರಣೆ ನಡೆಸಿದ ಸಿಂಧ್‌ ಹೈಕೋರ್ಟ್‌, ಅಪ್ರಾಪ್ತ ಹುಮಾ ಅವರಿಗೆ ಮೊದಲ ಋತುಸ್ರಾವ ಆಗಿರುವುದರಿಂದ ಶರಿಯಾ ಕಾನೂನಿನ ಅಡಿಯಲ್ಲಿ ಈ ವಿವಾಹವು ಮಾನ್ಯ ಎಂದು ತೀರ್ಪು ನೀಡಿದೆ.

ಫೆಬ್ರವರಿ 3ಕ್ಕೆ ಪ್ರಕರಣದ ವಿಚಾರಣೆ ನಡೆಸಿದ ಸಿಂಧ್ ಹೈಕೋರ್ಟ್, ಹುಮಾ ಅವರ ಪ್ರಾಯವನ್ನು ದೃಢಪಡಿಸುವ ಪರೀಕ್ಷೆಯ ಮೇಲ್ವಿಚಾರಣೆ ನಡೆಸುವಂತೆ ನ್ಯಾಯಾಧೀಶರಾದ ಮುಹಮ್ಮದ್‌ ಇಕ್ಬಾಲ್‌ ಕಲ್ರೋ ಮತ್ತು ಇರ್ಷದ್‌ ಅಲಿ ಅವರಿದ್ದ ನ್ಯಾಯಪೀಠವು ಪೊಲೀಸರಿಗೆ ಸೂಚಿಸಿತ್ತು.   

ಈ ತೀರ್ಪು 2014ರಲ್ಲಿ ಅಂಗೀಕಾರಗೊಂಡಿರುವ ಸಿಂಧ್ ಮಕ್ಕಳ ವಿವಾಹ ತಡೆ ಕಾಯ್ದೆಗೆ ವಿರುದ್ಧವಾಗಿದೆ. ಬಲವಂತದ ಮದುವೆಗಳನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೆ ಬಂದ ಈ ಕಾಯ್ದೆಯ ಅನುಸಾರ 18ಕ್ಕಿಂತ ಕಡಿಮೆ ಪ್ರಾಯದ, ವಿಶೇಷವಾಗಿ ಹಿಂದೂ ಮತ್ತು ಕ್ರೈಸ್ತ ಬಾಲಕಿಯರ ವಿವಾಹವನ್ನು ನಿಷೇಧಿಸಲಾಗಿದೆ.

ಪೊಲೀಸರು ಆರೋಪಿ ಜಬ್ಬಾರ್‌ಗೆ ಸಹಾಯ ಮಾಡುತ್ತಿದ್ದಾರೆ, ಪ್ರಾಯ ಪರೀಕ್ಷೆಯ ವರದಿಯನ್ನು ತಿರುಚಿ ವಿವಾಹವನ್ನು ಮಾನ್ಯ ಮಾಡಿಸುವ ಹುನ್ನಾರ ಇದೆ ಎಂಬುದು ಈ ಬಾಲಕಿಯ ಹೆತ್ತವರ ಆತಂಕವಾಗಿದೆ ಎಂದು ವಕೀಲೆ ತಬಸ್ಸುಮ್ ತಿಳಿಸಿದ್ದಾರೆ. ವಯಸ್ಸು ದೃಢವಾಗುವವರೆಗೂ ಹುಮಾ ಅವರನ್ನು ಜಬ್ಬಾರ್‌ನಿಂದ ದೂರವಿರಿಸಿ, ಮಹಿಳಾ ವಸತಿಗೃಹದಲ್ಲಿ ಇರಿಸುವಂತೆ ಅವಳ ಹೆತ್ತವರು ಕೇಳಿಕೊಂಡಿದ್ದಾರೆ. 

ಹುಮಾಳ ವಯಸ್ಸು 14 ಎಂಬುದನ್ನು ದೃಢೀಕರಿಸುವ ಶಾಲೆ ಮತ್ತು ಚರ್ಚ್‌ನ ದಾಖಲೆಗಳನ್ನು ಆಕೆಯ ಹೆತ್ತವರು ಸಲ್ಲಿಸಿರುವುದಾಗಿ ತಬಸುಂ ಹೇಳಿದ್ದಾರೆ. 

ಈ ವಿಷಯದಲ್ಲಿ ತಮ್ಮನ್ನು ಬೆಂಬಲಿಸುವಂತೆ ಹುಮಾ ಅವರ ತಾಯಿಯು ಇಂಡಿಪೆಂಡೆಂಟ್ ಕೆಥೋಲಿಕ್ ನ್ಯೂಸ್ ಜಾಲತಾಣದ ಮೂಲಕ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬಹುಸಂಖ್ಯಾತ ಮುಸ್ಲಿಮರಿರುವ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ಇತ್ತೀಚೆಗೆ ಅಂತರರಾಷ್ಟ್ರೀಯವಾಗಿ ಭಾರೀ ಸದ್ದು ಮಾಡಿದೆ. ಕಳೆದ ಒಂದು ತಿಂಗಳಲ್ಲಿ ಈ ಪ್ರಾಂತ್ಯದಲ್ಲಿ ಕನಿಷ್ಠ ಇಬ್ಬರು ಹಿಂದೂ ಹುಡುಗಿಯರ ಅಪಹರಣ, ಮತಾಂತರ ಹಾಗೂ ಬಲವಂತದ ವಿವಾಹ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು