ಬುಧವಾರ, ನವೆಂಬರ್ 20, 2019
27 °C

ಪಾಕ್ ಪ್ರಧಾನಿ ರಾಜೀನಾಮೆ ಗಡುವು ಮುಕ್ತಾಯ: ಸರ್ವಪಕ್ಷ ಸಭೆ ನಡೆಸಿದ ಫಜಲ್

Published:
Updated:

ಇಸ್ಲಾಮಾಬಾದ್: ಪಾಕಿಸ್ತಾನದ ಜಮೀಯತ್ ಉಲೇಮಾ–ಇ– ಇಸ್ಲಾಂ ಫಜಲ್ (ಜೆಯುಐ–ಎಫ್‌) ಸಂಘಟನೆಯ ನಾಯಕ ಮೌಲಾನಾ ಫಜಲ್ ಉರ್ ರೆಹಮಾನ್ ಸೋಮವಾರ ಸರ್ವಪಕ್ಷಗಳ ಸಭೆ ನಡೆಸಿ, ದೇಶದ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು. 

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ರೆಹಮಾನ್ ನೀಡಿದ್ದ 48 ಗಂಟೆಗಳ ಗಡುವು ಮುಗಿದಿದ್ದು, ಈ ಸಂಬಂಧ ಸೋಮವಾರ ಸಭೆ ನಡೆಸಲಾಗಿದೆ. 

ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ರೆಹಮಾನ್ ‘ಆಜಾದಿ ಮಾರ್ಚ್‌’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನೆಡಸುತ್ತಿದ್ದು, ‘ಪ್ರಧಾನಿ ಸ್ಥಾನದಿಂದ ಇಮ್ರಾನ್ ಅವರನ್ನು ಕೆಳಗಿಳಿಸುವ ತನಕ ಈ ಆಂದೋಲನ ಮುಂದುವರಿಯಲಿದೆ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವುದಿಲ್ಲ’ ಎಂದು ಹೇಳಿದ್ದಾರೆ. 

ಪ್ರತಿಭಟನೆಗೆ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್‌–ಎನ್‌), ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ), ಪಾಕ್ತುನ್‌ಖಾವಾ ಮಿಲ್ಲಿ ಅವಾಮಿ ಪಕ್ಷ, ಖೌಮಿ ವತನ್ ಪಕ್ಷ, ನ್ಯಾಷನಲ್ ಪಾರ್ಟಿ ಮತ್ತು ಅವಾಮಿ ನ್ಯಾಷನಲ್ ಪಕ್ಷಗಳು ಬೆಂಬಲ ನೀಡಿವೆ. ಆದರೆ, ಪಿಪಿಪಿ ಪಕ್ಷದ ಮುಖ್ಯಸ್ಥ ಬಿಲಾವಲ್ ಭುಟ್ಟೊ–ಜರ್ದಾರಿ, ಪಿಎಂಎಲ್‌–ಎನ್ ಮುಖ್ಯಸ್ಥ ಶೆಹಬಾಜ್ ಶರೀಫ್ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿಲ್ಲವೆಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ. 

ಈ ನಡುವೆ, ‘ದ್ವೇಷ, ಪ್ರಚೋದನಕಾರಿ ಮತ್ತು ದೇಶದ್ರೋಹದ ಭಾಷಣಗಳನ್ನು ಮಾಡಿರುವ ಜೆಯುಐ–ಎಫ್ ನಾಯಕ ರೆಹಮಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಲಾಹೋರ್ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. 

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಪ್ರತಿಭಟನಕಾರರ ಬೇಡಿಕೆಯನ್ನು ಇಮ್ರಾನ್ ಖಾನ್ ತಿರಸ್ಕರಿಸಿದ್ದು, ಜೈಲಿನಲ್ಲಿರುವ ಪಿಎಂಎಲ್‌–ಎನ್ ಮತ್ತು ಪಿಪಿಪಿಯ ಉನ್ನತ ನಾಯಕರ ಬಿಡುಗಡೆಯ ಒಪ್ಪಂದಕ್ಕಾಗಿ ಪ್ರತಿಭಟನೆ ನಡೆಯುತ್ತಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ವಿರೋಧಪಕ್ಷಗಳ ನಾಯಕರಿಗೆ ರಾಷ್ಟ್ರೀಯ ಸಾಮರಸ್ಯ ಕದಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲವೆಂದು ಪುನರುಚ್ಚರಿಸಿದ್ದಾರೆ.

ಮಾತುಕತೆಗೆ ಪ್ರಧಾನಿ ನಿರ್ಧಾರ
‘ಮಾತುಕತೆ ಮೂಲಕ ಪ್ರತಿಪಕ್ಷಗಳ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ’ಎಂದು ಪ್ರಧಾನಿ ವಿಶೇಷ ಸಹಾಯಕ ಡಾ.ಫಿರ್ದೌಸ್ ಆಶಿಕ್ ಅವಾನ್ ಹೇಳಿದ್ದಾರೆ. 

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದನ್ನು ಹೊರತುಪಡಿಸಿ, ಇಮ್ರಾನ್ ಖಾನ್ ಸರ್ಕಾರವು ವಿರೋಧ ಪಕ್ಷಗಳ  ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದೆ.

ಪ್ರತಿಕ್ರಿಯಿಸಿ (+)