ಮಂಗಳವಾರ, ಸೆಪ್ಟೆಂಬರ್ 24, 2019
29 °C
ಸಹಪಾಠಿಯನ್ನು ಕೊಂದ ಶಿಕ್ಷಕನ ವಿರುದ್ಧ ಸೇಡು

ಲಾಹೋರ್: ಶಾಲೆಗೇ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು

Published:
Updated:

ಲಾಹೋರ್ (ಪಿಟಿಐ): ಸಹಪಾಠಿಯನ್ನು ಕೊಂದ ಶಾಲಾ ಶಿಕ್ಷಕನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳ ಗುಂಪೊಂದು ಶಾಲೆಗೆ ಬೆಂಕಿ ಹಚ್ಚಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. 

ಲಾಹೋರಿನ ಗುಲ್ಷನ್–ಐ–ರಾವಿ  ಪ್ರದೇಶದ ಅಮೆರಿಕನ್ ಲ್ಯೂಸಿಟಫ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹಫೀಜ್ ಹುನೈನ್ ಬಿಲಾಲ್‌ನನ್ನು ಗುರುವಾರ ಶಿಕ್ಷಕ ಮೊಹಮ್ಮದ್ ಕುಮ್ರನ್ ಹೊಡೆದಿದ್ದರು.

‘ಪಾಠವನ್ನು ನೆನಪಿಸಿಕೊಳ್ಳದೇ ಇದ್ದುದಕ್ಕೆ ಹಫೀಜ್‌ನನ್ನು ಪದೇಪದೇ ಹೊಡೆದಿದ್ದ ಶಿಕ್ಷಕ ಆತನ ತಲೆಕೂದಲು ಹಿಡಿದು ತಲೆಯನ್ನು ಗೋಡೆಗೆ ಗುದ್ದಿಸಿದ್ದ. ಇದರಿಂದ ಶಾಲೆಯಲ್ಲೇ ಕುಸಿದು ಬಿದ್ದಿದ್ದ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. ‌

ಘಟನೆಯ ಬಗ್ಗೆ ಆಕ್ರೋಶಗೊಂಡಿದ್ದ ಹಫೀಜ್‌ನ ಸಹಪಾಠಿಗಳ ಗುಂಪೊಂದು ಶಾಲೆಯ ಕಟ್ಟಡಕ್ಕೆ ಶುಕ್ರವಾರ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಎಸೆದಿತ್ತು. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಬಾಲಕನ ತಂದೆಯ ಪರವಾಗಿ ಶಿಕ್ಷಕ ಕಮ್ರಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧವಾಗಿದೆ.

Post Comments (+)