4
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಪಾಕಿಸ್ತಾನದ ಪದಚ್ಯುತ ಪ್ರಧಾನಿ: ₹69 ಕೋಟಿ ದಂಡ

ನವಾಜ್‌ ಷರೀಫ್‌ಗೆ 10 ವರ್ಷ ಜೈಲು

Published:
Updated:

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ಗೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಹತ್ತು ವರ್ಷ ಜೈಲು ಹಾಗೂ ₹69 ಕೋಟಿ ದಂಡ ವಿಧಿಸಿದೆ.

 ಭ್ರಷ್ಟಾಚಾರದ ಮೂರು ಪ್ರಕರಣಗಳ ಪೈಕಿ ಮೊದಲ ಪ್ರಕರಣದಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ ನವಾಜ್‌ ಷರೀಫ್‌ ಮಗಳು ಮರ‍್ಯಾಮ್‌ ಅವರಿಗೆ ಏಳು ವರ್ಷ ಮತ್ತು ಅಳಿಯ ಮುಹಮ್ಮದ್‌ ಸಫ್ದರ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಲಂಡನ್‌ನಲ್ಲಿ ಐಷಾರಾಮಿ ಅವೆನ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ನಲ್ಲಿನ ನಾಲ್ಕು ಮನೆಗಳ ಮಾಲೀಕತ್ವ ಹೊಂದಿದ್ದ ಪ್ರಕರಣದಲ್ಲಿ ನವಾಜ್‌ ಷರೀಫ್‌ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ. ಪಾಕಿಸ್ತಾನದ ಪರವಾಗಿ ಅವೆನ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ ವಶಪಡಿಸಿಕೊಳ್ಳುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.ನ್ಯಾಯಾಧೀಶ ಮೊ

ಹಮ್ಮದ್‌ ಬಶೀರ್‌ ಈ ತೀರ್ಪು ನೀಡಿದ್ದಾರೆ. ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಮುನ್ನವೇ ಈ ತೀರ್ಪು ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ.

ನ್ಯಾಯಾಲಯ ತೀರ್ಪು ನೀಡಿದ ಸಂದರ್ಭದಲ್ಲಿ ನವಾಜ್‌ ಷರೀಫ್‌ ಮತ್ತು ಮರ‍್ಯಾಮ್‌ ಲಂಡನ್‌ನ ಅವೆನ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ನಲ್ಲೇ ಇದ್ದರು ಎಂದು ವರದಿಯಾಗಿದೆ.

1993ರಲ್ಲಿ ಈ ಅಪಾರ್ಟ್‌ಮೆಂಟ್‌ನ ಮಾಲೀಕತ್ವವನ್ನು ಷರೀಫ್‌ ಕುಟುಂಬ ಪಡೆದಿತ್ತು.

ಷರೀಫ್‌ ಪುತ್ರರಾದ ಹಸನ್‌ ಮತ್ತು ಹುಸೇನ್‌ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಇಬ್ಬರು ಇದುವರೆಗೆ ಒಂದು ಬಾರಿಯೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ.  ಹೀಗಾಗಿ, ಇಬ್ಬರನ್ನು ನಾಪತ್ತೆಯಾದವರು ಎಂದು ಘೋಷಿಸಲಾಗಿದೆ.

ನ್ಯಾಯಾಲಯದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯ ಇರುವ ಸಂಕೀರ್ಣದ ಆವರಣದೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಷರೀಫ್‌ ಅಕ್ರಮವಾಗಿ ಲಂಡನ್‌ನಲ್ಲಿ ಐಷಾರಾಮಿ ಸಂಪತ್ತು ಹೊಂದಿದ್ದ ಸಂಪತ್ತಿನ ಮಾಹಿತಿ ಪನಾಮಾ ಪೇಪರ್ಸ್‌ ಮೂಲಕ ಸೋರಿಕೆಯಾಗಿತ್ತು. ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಷರೀಫ್‌ ಅವರ ಹೆಸರು ಈ ಹಗರಣದಲ್ಲಿ ಕೇಳಿಬಂದಾಗ, ಸುಪ್ರೀಂಕೋರ್ಟ್‌ ಅವರನ್ನು ಪದಚ್ಯುತಗೊಳಿಸಿ ಆದೇಶಿಸಿತ್ತು. ಅಲ್ಲದೆ, ಅವರ ಮಕ್ಕಳ ವಿರುದ್ಧವೂ ಭ್ರಷ್ಟಾಚಾರದ ಪ್ರಕರಣ ದಾಖಲಿಸಲಾಗಿತ್ತು. 

*
ಭ್ರಷ್ಟಾಚಾರದ ಹಣದಿಂದ ಲಂಡನ್‌ನ ಅವೆನ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ ಖರೀದಿಸಿರುವುದು ಈಗ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಸಾಬೀತಾಗಿದೆ
-ಸರ್ದಾರ್‌ ಮುಜಾಫರ್‌ ಅಬ್ಬಾಸಿ, ಸರ್ಕಾರದ ಪರ ವಕೀಲ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !