ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಮಲಿನಗೊಳಿಸಿದ ರಾಜಕಾರಣಿಗಳು

Last Updated 28 ಫೆಬ್ರುವರಿ 2018, 8:37 IST
ಅಕ್ಷರ ಗಾತ್ರ

ಮುಳಬಾಗಲು: ‘ಕೋಲಾರ ಜಿಲ್ಲೆಯ ಮೇಲೆ ವರುಣದೇವ ಅವಕೃಪೆ ತೋರಿದ್ದಾನೆ. ಜೀವಜಲದ ಅಭಾವದ ನಡುವೆಯೂ ಇಲ್ಲಿನ ಜನ ಪ್ರಯೋಗಶೀಲರಾಗಿದ್ದಾರೆ’ ಎಂದು ಸಾಹಿತಿ ರಹಮತ್ ತರೀಕೆರೆ ನುಡಿದರು.

ನಗರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಫಾಟಿಸಿ ಮಾತನಾಡಿ, ಇಲ್ಲಿನ ನೆಲ ತತ್ವಪದ ಶ್ರೀಮಂತಿಕೆ ಮತ್ತು ಹಸಿರು ಚಳವಳಿಗೆ ಮುನ್ನುಡಿ ಬರೆದಿದೆ. ಜತೆಗೆ ಜಿಲ್ಲೆಯು ಅವದೂತರಿಗೂ ಪ್ರಸಿದ್ಧಿಯಾಗಿದೆ. ಅವದೂತರು ತತ್ವಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿಕೊಂಡು ಬಂದಿದ್ದಾರೆ ಎಂದರು.

ಭಾಷೆ ಇಲ್ಲದೆ ಸಾಹಿತ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಭಾಷೆ ಕುಲುಷಿತಗೊಂಡಿದೆ. ರಾಜಕಾರಣಿಗಳು ಭಾಷೆಯನ್ನು ಮಲೀನಗೊಳಿಸುತ್ತಿದ್ದಾರೆ. ಏಕ ವಚನದಲ್ಲಿ ದೂಷಿಸುವುದು, ಕೆಳ ಮಟ್ಟದಲ್ಲಿ ಪದಗಳನ್ನು ಬಳಸುವುದು ಮನಸ್ಸಿನ ಮಲೀನಕ್ಕೆ ಕಾರಣ. ಬಸವಣ್ಣರ ನುಡಿಯನ್ನೂ ಮಲೀನಗೊಳಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಿ.ವಿ.ಗುಂಡಪ್ಪ ಮತ್ತು ಕುವೆಂಪು ನಡುವೆ ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಅದು ತಾರ್ಕಿಕವಾಗಿತ್ತು. ಪರಸ್ಪರರು ಗೌರವಿಸುವುದು ಇತ್ತು. ಇಂದಿನ ಪತ್ರಿಕೆಗಳು ಭಾಷೆಯನ್ನು ಕಲುಷಿತಗೊಳಿಸುತ್ತಿದೆ. ಸಾಹಿತಿಗಳು ಇವೆಲ್ಲವನ್ನು ಮೆಟ್ಟಿ ನಿಲ್ಲಬೇಕು ಎಂದರು.

ಸಂಘರ್ಷ ನಡೆದಿಲ್ಲ: ಜಿಲ್ಲೆಯ ಅಕ್ಕಪಕ್ಕ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿವೆ. ಆದರೆ, ಇಲ್ಲಿ ಎಂದಿಗೂ ಭಾಷೆ ವಿಷಯವಾಗಿ ಸಂಘರ್ಷ ನಡೆದಿಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಬಗ್ಗೆ ಅಧ್ಯಯನ ನಡೆಯಬೇಕು. ಭವಿಷ್ಯದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಾಹಿತ್ಯ ಸಮ್ಮೇಳನವೆಂದು ಬದಲಿಸಿ ತೆಲುಗು ಮತ್ತು ಉರ್ದು ಭಾಷಿಕರಿಗೆ ತಮ್ಮ ಕವಿತೆಗಳನ್ನು ಓದಲು ಅವಕಾಶ ಕೊಡಬೇಕು ಎಂದು ಆಶಿಸಿದರು.

ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕೇ ಹೊರತು ದ್ವೇಷವನ್ನಲ್ಲ. ದೇಶದ ಬಹುಮುಖಿ ಸಂಸ್ಕೃತಿಯನ್ನು ಉಳಿಸಬೇಕಿದೆ. ಆಹಾರ ಪದ್ಧತಿ ವಿಷಯದಲ್ಲಿ ನಡೆಯುತ್ತಿರುವ ಹಲ್ಲೆಗಳು ನಿಲ್ಲಬೇಕು. ಧರ್ಮದ ಹೆಸರಿನಲ್ಲಿ ಗಲಭೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನ ಸಹಕಾರಿ: ‘ಕನ್ನಡ ಭಾಷೆ, ಸಂಸ್ಕೃತಿ ಮತ್ತು ಆಚಾರ ವಿಚಾರ ಬೆಳಕಿಗೆ ತರಲು ಸಾಹಿತ್ಯ ಸಮ್ಮೇಳನಗಳು ಸಹಕಾರಿ’ ಎಂದು ಸಮ್ಮೇಳನಾಧ್ಯಕ್ಷ ಶಿವಪ್ಪ ಅರಿವು ಪ್ರತಿಪಾದಿಸಿದರು.

ಕೃಷಿ ಬಿಕ್ಕಟ್ಟು, ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಗಮನ ಹರಿಸಬೇಕಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ದ್ವಿಭಾಷಾ ಶಿಕ್ಷಣ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಅನುಷ್ಠಾನಗೊಳಿಸಬೇಕು. ಆರನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಕೃಷಿಕರು, ಬಡವರು, ದೀನ ದಲಿತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಹೇಳಿದರು.

‘ಪ್ರತಿಯೊಬ್ಬರ ಜೀವನ ಕ್ರಮ ತಿದ್ದಬೇಕು, ಕನ್ನಡವೇ ಸಂಸ್ಕೃತಿಯಾಗಬೇಕು. ನಮ್ಮ ಮೇಲೆ ಅನಗತ್ಯವಾಗಿ ಆಂಗ್ಲ ಭಾಷೆ ಪ್ರಭಾವ ಹೆಚ್ಚಾಗಿರುವುದನ್ನು ತಡೆಯಬೇಕು. ದಕ್ಷಿಣ ಭಾರತದಲ್ಲಿ ಇಂಗ್ಲಿಷ್ ಪ್ರಭಾವ ಹೆಚ್ಚಾಗಿದೆ. ಅನ್ನಕ್ಕಾಗಿ ಆಂಗ್ಲ ಭಾಷೆಯನ್ನೇ ಜೀವನ ಕ್ರಮವಾಗಿಸಿಕೊಳ್ಳುತ್ತಿರುವುದು ವಿಷಾದನೀಯ. ಉತ್ತರ ಭಾರತದಲ್ಲೂ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವುದು ಆತಂಕಕಾರಿ. ಸಮ್ಮೇಳನಗಳು ಈ ಬಗ್ಗೆ ಬೆಳಕು ಚೆಲ್ಲಬೇಕು’ ಎಂದು ಕಿವಿಮಾತು ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ: ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಗೋಕುಲ್ ನಾರಾಯಣಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಅವರು ಸಮ್ಮೇಳನಾಧ್ಯಕ್ಷ ಶಿವಪ್ಪ ಅರಿವುರ ಕೃತಿಗಳನ್ನು ಬಿಡುಗಡೆ ಮಾಡಿದರು.

ಸಮ್ಮೇಳನಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಗಂಗಮ್ಮ ಗುಡಿಯಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಮಂಜು ಕನ್ನಿಕಾ, ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್‌ಕುಮಾರ್‌, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯರಾಮರೆಡ್ಡಿ, ಸಾಹಿತಿ ನಂಗಲಿ ಚಂದ್ರಶೇಖರ್, ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT