ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲ, ರಸ್ತೆ; ಚನ್ನೀಪುರ ಮೋಳೆ ದುಸ್ಥಿತಿ

ಜೀವ ಕೈಯಲ್ಲಿ ಹಿಡಿದು ನಡೆದಾಡುವಂತಹ ಸ್ಥಿತಿ ವಾರ್ಡ್‌ ಸಂಖ್ಯೆ 23ರಲ್ಲಿದೆ...
Last Updated 4 ಮೇ 2018, 7:38 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿಂದ ಚೆನ್ನಿಪುರದ ಮೋಳೆ ಗ್ರಾಮಕ್ಕೆ ಹೋಗುವಾಗ ಸಿಗುವ ವಾರ್ಡ್ ಸಂಖ್ಯೆ 23ರ ವ್ಯಾಪ್ತಿಯಲ್ಲಿನ ಈ ರಸ್ತೆ ನಿಜಕ್ಕೂ ಯಮಸ್ವರೂಪಿ ಎನಿಸಿದೆ.

ಅವೈಜ್ಞಾನಿಕ ಹಾಗೂ ಮಂದಗತಿಯ ಕಾಮಗಾರಿ ನಡೆದಿದ್ದು, ಮೊನ್ನೆ ಸುರಿದ ಮಳೆಗೆ ರಸ್ತೆ ದೊಡ್ಡ ಮೋರಿಯಾಗಿ ಮಾರ್ಪಾಟಾಗಿದೆ. ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಒತ್ತಡದಲ್ಲಿದ್ದಾರೆ.

ಒಳಚರಂಡಿ ಹಾಗೂ ತೆರೆದ ಚರಂಡಿ ನಿರ್ಮಾಣ ಕಾರ್ಯ ನಗರದಲ್ಲಿ ವರ್ಷಗಳು ಉರುಳಿದರೂ ಮುಕ್ತಾಯವಾಗುವ ಸೂಚನೆಗಳೇ ಇಲ್ಲ ಎನಿಸುವಂತಾಗಿದೆ. ಎಷ್ಟರಮಟ್ಟಿಗೆ ಎಂದರೆ ರಸ್ತೆಗಳು ಇದೀಗ ಮೋರಿಗಳಾಗಿ ಮಾರ್ಪಾಡಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಈ ರಸ್ತೆ.

ಮುಂಗಾರುಪೂರ್ವದಲ್ಲಿ ಬಿದ್ದ ಅಲ್ಪ ಮಳೆಗೇ ಹೀಗಾದರೆ ಮುಂಗಾರಿನಲ್ಲಿ ದೊಡ್ಡ ಮಳೆ ಸುರಿದಾಗ ಇನ್ನೆಂತಹ ಸ್ಥಿತಿ ಒದಗಬಹುದು ಎಂಬುದು ಇಲ್ಲಿನ ನಿವಾಸಿಗಳ ಆತಂಕ.

ರಸ್ತೆಯುದ್ದಕ್ಕೂ ಜಲ್ಲಿ ಹಾಕಿ ತಿಂಗಳುಗಳು ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.‌‌

ಚೆನ್ನಿಪುರದ ಮೋಳೆಯ ಭಾಗಕ್ಕೆ ಸಾಮಾನ್ಯ ಹೂವ್ಯಾಪಾರಿಗಳೇ ಹೆಚ್ಚು ಹೋಗುತ್ತಾರೆ. ಇಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಹೂ ಖರೀದಿಸಿ ನಗರದಲ್ಲಿ ಮಾರಾಟ ಮಾಡುವುದು ಇವರ ಕಾಯಕ. ಇವರಲ್ಲಿ ಹೆಚ್ಚಿನವರು ಅಶಕ್ತರು, ವೃದ್ಧರು ಹಾಗೂ ಮಹಿಳೆಯರೇ ಇದ್ದಾರೆ. ಇವರು ಈ ರಸ್ತೆಯಲ್ಲಿ ಸಾಗಲು ಮೋರಿಯ ಕಟ್ಟೆಯ ಮೇಲೆ ಸಾಗಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಗಾಯಗೊಳ್ಳುವುದು ಖಚಿತ ಎಂಬಂತಾಗಿದೆ.

ಹಾವು, ಚೇಳುಗಳ ಕಾಟ: ಮಳೆ ನೀರಿನೊಂದಿಗೆ ಬರುವ ಹಾವು ಚೇಳುಗಳು ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ. ಮೋರಿ ನೀರು ಸರಾಗವಾಗಿ ಹರಿದು ಹೋದರೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಇಲ್ಲಿ ಬಂದು ನೀರು ನಿಂತುಕೊಳ್ಳುವುದರಿಂದ ಹಾವು, ಚೇಳುಗಳ ಭೀತಿ ಇದೆ. ಇನ್ನು ಒಂದು ದಿನ ಕಳೆದರೆ ಇಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ ಎಂದು ಸ್ಥಳೀಯ ನಿವಾಸಿ ಸವಿತಾ ಹೇಳಿದರು.

ಈಚೆಗೆ ಸುರಿದ ಮಳೆಯಿಂದ ಸಂತೇಮರಹಳ್ಳಿ ಹೋಬಳಿಯಲ್ಲಿ ಹಾನಿಯಾಗಿದೆ. ಹಂಡರಕಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಭೀಮಲಿಂಗೇಶ್ವರ ದೇಗುಲದ ಚಾವಣಿ ಹಾಗೂ ಆನಂದ್ ಎಂಬುವವರ ಮನೆಯೊಂದರ ಚಾವಣಿ ಹಾರಿ ಹೋಗಿದೆ. ಹಂಡರಕಳ್ಳಿ ಮೋಳೆ ಗ್ರಾಮದಲ್ಲಿ ಹಲವು ಮರಗಳು ಬುಡಮೇಲಾಗಿವೆ.

ಮಾದಾಪುರದ ಪುಟ್ಟಣ್ಣಕಟ್ಟೆ, ಕಿರಗಸೂರಿನ ದಾಸನಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳು ಒಂದೇ ಮಳೆಗೆ ಭರ್ತಿಯಾಗಿ, ಕೋಡಿ ಬಿದ್ದಿವೆ.

**
ವಾರ್ಡ್ ಸಂಖ್ಯೆ 23ರ ಈ ರಸ್ತೆಯಲ್ಲಿ ಓಡಾಡಲು ಜಾಗವೇ ಇಲ್ಲ. ಮೋರಿ ನೀರು ಹೋಗುತ್ತಿಲ್ಲ. ಇತ್ತ ಕಡೆ ಯಾವ ಅಧಿಕಾರಿಗಳೂ ಗಮನಕೊಡುತ್ತಿಲ್ಲ – ಮಂಗಳಮ್ಮ,‌ ಗೃಹಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT