ಶುಕ್ರವಾರ, ಆಗಸ್ಟ್ 23, 2019
25 °C

ಪಾಕಿಸ್ತಾನ: ಮಳೆ ಅವಘಡದಲ್ಲಿ 28 ಸಾವು

Published:
Updated:
Prajavani

ಪೇಶಾವರ (ಪಿಟಿಐ): ಮುಂಗಾರು ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ವಾಯವ್ಯ ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 28 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಖೈಬರ್‌ ಪಕ್ತುಂಕ್ವಾ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಮಳೆಯಿಂದ ಸಂಭವಿಸಿದ ಅವಘಡಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 22 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಪಿಡಿಎಂಎ) ವಕ್ತಾರರು ತಿಳಿಸಿದ್ದಾರೆ. 

ಬಜೌರ್ ಮತ್ತು ಸ್ವಾತ್ ಜಿಲ್ಲೆಯಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ದಿರ್ ಲೋವರ್, ಬುನರ್, ಮಲಕಾಂಡ್, ಶಾಂಗ್ಲಾ, ಔರಾಕ್‌ಜಿ ಮತ್ತು ಟೋರ್‌ಘಾರ್‌ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಹಿಸ್ತಾನ್ ಜಿಲ್ಲೆಯ ಇಂಡಸ್‌ ನದಿಯಲ್ಲಿ ವಾಹನ ಬಿದ್ದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ.

ಚಿತ್ರಾಲ್‌ ಜಿಲ್ಲೆಯ ಲಾವಾರಿ ಸುರಂಗದಲ್ಲಿ ಕೆಲಸ ಮಾಡುವ ಚೀನಾದ ಎಂಜಿನಿಯರ್‌ಗಳು ನೆಲೆಸಿದ್ದ ಕಾಲೊನಿ ಜಲಾವೃತ್ತಗೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಕರಾಚಿಯಲ್ಲಿ ಈವರೆಗೆ ಒಟ್ಟು 150 ಮಿ.ಮೀ. ಮಳೆಯಾಗಿದ್ದು, ಭಾನುವಾರ ರಾತ್ರಿ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. 1992ರ ಬಳಿಕೆ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ತಿಳಿಸಿದೆ.  ಭಾರಿ ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. 

Post Comments (+)