ಭಾರತದೊಂದಿಗೆ ಸ್ನೇಹಹಸ್ತ; ಮಾತುಕತೆಗೆ ಸಿದ್ಧ: ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ

7

ಭಾರತದೊಂದಿಗೆ ಸ್ನೇಹಹಸ್ತ; ಮಾತುಕತೆಗೆ ಸಿದ್ಧ: ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ

Published:
Updated:
Deccan Herald

ಇಸ್ಲಾಮಾಬಾದ್‌: ಪಾಕಿಸ್ತಾನದ ನೂತನ ವಿದೇಶಾಂಗ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಷಾ ಮಹಮೂದ್‌ ಖುರೇಷಿ ಭಾರತದೊಂದಿಗೆ ಸ್ನೇಹಹಸ್ತ ಚಾಚುವ ಮಾತುಗಳನ್ನು ಆಡಿದ್ದಾರೆ. 

ಪಾಕಿಸ್ತಾನದ ಅಧ್ಯಕ್ಷರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಖುರೇಷಿ ಮಾತನಾಡಿದರು. ಉಭಯ ರಾಷ್ಟ್ರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ವಿಷಯಗಳ ಇತ್ಯರ್ಥಕ್ಕೆ ನಿರಂತರ ಮಾತುಕಡೆ ನಡೆಸಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. 

ತನ್ನ ನೆರೆ ರಾಷ್ಟ್ರಗಳೊಂದಿಗೆ ಮತ್ತೆ ಬಾಂಧವ್ಯ ವೃದ್ಧಿಸಿಕೊಳ್ಳಲು ಪಾಕಿಸ್ತಾನ ಬಯಸುತ್ತದೆ ಹಾಗೂ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ನಿರಂತರ ಮಾತುಕತೆಯ ಮೂಲಕವೇ ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನ ಇಚ್ಛಿಸುತ್ತದೆ ಎಂದಿದ್ದಾರೆ. 

ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ(ಪಿಪಿಪಿ) ಸರ್ಕಾರದಲ್ಲಿ ಖುರೇಷಿ 2008–2011ರ ವರೆಗೆ ವಿದೇಶಾಂಗ ಸಚಿವರಾಗಿದ್ದರು. 2008ರಲ್ಲಿ ಭಾರತದ ವಾಣಿಜ್ಯ ನಗರಿ ಮುಂಬೈ ಮೇಲೆ ಪಾಕಿಸ್ತಾನದ 10 ಮಂದಿ ಎಲ್‌ಇಟಿ ಉಗ್ರರರು ದಾಳಿ ನಡೆಸಿದ ಸಂದರ್ಭದಲ್ಲಿ ಖುರೇಷಿ ನವದೆಹಲಿಯಲ್ಲಿದ್ದರು. 

2016ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ತಂಡಗಳಿಂದ ಭಾರತದ ಮೇಲೆ ನಡೆದ ದಾಳಿ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ನಿರ್ದಿಷ್ಟ ದಾಳಿ (ಸರ್ಜಿಕಲ್‌ ಸ್ಟ್ರೈಕ್‌) ಬಳಿಕ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತದ ಗೂಢಾಚಾರಿ ಎಂದು ಆರೋಪಿಸಿ ಕುಲಭೂಷಣ್‌ ಯಾದವ್‌ಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಕಳೆದ ವರ್ಷ ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಿದ ನಂತರ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗೂ ತೊಡಕುಂಟಾಗಿದೆ. 

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಭಾನುವಾರ ಪತ್ರ ರವಾನಿಸಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಅಭಿನಂದಿಸಿರುವ ಕುರಿತು ಖುರೇಷಿ ಪ್ರಸ್ತಾಪಿಸಿದ್ದಾರೆ. ’ವಿವಾದಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಪ್ರಸ್ತಾಪ ಮಾಡಿದ್ದು, ಅದನ್ನು ಸ್ವಾಗತಿಸುತ್ತೇನೆ. ನಾವು ಕೇವಲ ನೆರೆಯ ರಾಷ್ಟ್ರಗಳಲ್ಲ ಅದರೊಂದಿಗೆ ಅಣ್ವಸ್ತ್ರ ಬಲವನ್ನೂ ಹೊಂದಿರುವವರು ಆಗಿದ್ದೇವೆ. ನಮ್ಮ ನಡುವೆ ಹಳೆಯ ವಿವಾದಗಳಿವೆ ಹಾಗೂ ಅವುಗಳ ಬಗ್ಗೆ ಉಭಯ ರಾಷ್ಟ್ರಗಳಿಗೂ ತಿಳಿದಿವೆ. ಈ ವಿಚಾರಗಳಲ್ಲಿ ಎರಡೂ ರಾಷ್ಟ್ರಗಳಿಗೂ ಪ್ರಾಯೋಗಿಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೆರೆಯವರಾಗಿ ಸದಾ ದ್ವೇಷಮಯ ಸ್ಥಿತಿಯಲ್ಲಿಯೇ ಇರುವುದು ಸಾಧ್ಯವಿಲ್ಲ ಹಾಗೂ ’ಕಾಶ್ಮೀರ’ದ ವಿವಾದವು ಎರಡೂ ರಾಷ್ಟ್ರಗಳಿಗೆ ತಿಳಿದಿರುವುದೇ’ ಎಂದು ಮಾತುಕತೆಯ ಪ್ರಸ್ತಾಪ ಇಟ್ಟಿದ್ದಾರೆ.

'ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಲಾಹೋರ್‌ ಮತ್ತು ಇಸ್ಲಾಮಾಬಾದ್‌ಗೆ ಭೇಟಿ ನೀಡಿ ಪಾಕಿಸ್ತಾನದ ವಾಸ್ತವ ಮತ್ತು ಕಾಶ್ಮೀರದ ಸಮಸ್ಯೆಯನ್ನು ಗಮನಿಸಿದ್ದರು. ನಾವು ಬಯಸಿದರೂ, ಬಯಸದೇ ಹೋದರು ಕಾಶ್ಮೀರದ ಬಗ್ಗೆ ವಿವಾದವಿದೆ. ಉಭಯ ರಾಷ್ಟ್ರಗಳು ಇದನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು. ನನ್ನ ಪ್ರಕಾರ, ಅದರ ಹೊರತು ಬೇರೆ ಮಾರ್ಗಗಳಿಲ್ಲ’ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪಕ್ಷ ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಜುಲೈ 25ರಂದು ಇಮ್ರಾನ್‌ ಖಾನ್‌ ಅವರು ಕಾಶ್ಮೀರ ಸಮಸ್ಯೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧವಿರುತ್ತದೆ ಎಂದಿದ್ದರು. ಭಾನುವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿಯೂ, ದೇಶದಲ್ಲಿ ಶಾಂತಿ ನೆಲೆಸಲು ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯವೃದ್ಧಿ ಅಗತ್ಯ ಎಂದಿದ್ದರು. 

ಅಘ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗದೆ ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎನ್ನುವ ಮೂಲಕ ಅಫ್ಗಾನಿಸ್ತಾನದೊಂದಿಗೆ ಶೀಘ್ರದಲ್ಲಿಯೇ ಮಾತುಕತೆ ನಡೆಸುವುದನ್ನು ಸಚಿವ ಖುರೇಷಿ ಸ್ಪಷ್ಟಪಡಿಸಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !