‘ಅಮೆರಿಕದ ಮೇಲೆ ದಾಳಿಗೆ ಚೀನಾ ಸಿದ್ಧತೆ’

7
ವಿವಾದಿತ ಪ್ರದೇಶದಲ್ಲಿ ಚೀನಾ ಸಮರಾಭ್ಯಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೆಂಟಗನ್‌

‘ಅಮೆರಿಕದ ಮೇಲೆ ದಾಳಿಗೆ ಚೀನಾ ಸಿದ್ಧತೆ’

Published:
Updated:

ವಾಷಿಂಗ್ಟನ್‌ : ಬಾಂಬ್‌ ದಾಳಿಯ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಯೋಧರಿಗೆ ಚೀನಾ ತರಬೇತಿ ನೀಡುತ್ತಿದ್ದು, ಅಮೆರಿಕ ಮತ್ತು ಅದರ ಆಪ್ತ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 

ವಾಣಿಜ್ಯ–ವ್ಯಾಪಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಪೆಂಟಗನ್‌ (ರಕ್ಷಣಾ ಇಲಾಖೆ) ಈ ಹೇಳಿಕೆ ಬಿಡುಗಡೆ ಮಾಡಿದೆ. 

ಚೀನಾದ ಸೇನೆಯಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಮೂರು ವರ್ಷಗಳಿಂದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ನಿರಂತರವಾಗಿ ಸಮರಾಭ್ಯಾಸ ನಡೆಸುತ್ತಿದೆ. 2017ರಲ್ಲಿ ₹13.30 ಲಕ್ಷ ಕೋಟಿಯನ್ನು ಪಿಎಲ್‌ಎ ರಕ್ಷಣಾ ಕ್ಷೇತ್ರಕ್ಕೆ ವೆಚ್ಚ ಮಾಡಿದೆ ಎಂದು ಪೆಂಟಗನ್‌ ಹೇಳಿದೆ.

 ‘ಆರ್ಥಿಕ ಬೆಳವಣಿಗೆ ಕ್ಷೀಣಿಸುತ್ತಿದ್ದರೂ, ಚೀನಾದ ಅಧಿಕೃತ ರಕ್ಷಣಾ ಬಜೆಟ್‌ನ ಗಾತ್ರ ಹೆಚ್ಚುತ್ತಲೇ ಇದೆ. 2028ರ ವೇಳೆಗೆ ಇದು ₹16.80 ಲಕ್ಷ ಕೋಟಿಗೆ ಮುಟ್ಟಲಿದೆ’ ಎಂದು ವರದಿ ಹೇಳಿದೆ. 

ವಿವಾದಿತ ದಕ್ಷಿಣ ಚೀನಾ ಸಾಗರದ ಮೇಲೆ ಇದೇ ವರ್ಷದ ಪ್ರಾರಂಭದಲ್ಲಿ ಚೀನಾ ವಾಯುಪಡೆ ಯೋಧರು ಸಮರಾಭ್ಯಾಸ ನಡೆಸಿದ್ದರು.ಇದಕ್ಕೆ ಪ್ರತಿಯಾಗಿ, ಅಮೆರಿಕವು ರಷ್ಯಾದೊಂದಿಗೆ ಸೇರಿ ನೂತನ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ ರೂಪಿಸಿಕೊಂಡಿದ್ದವು. 

ಇದೇ ವರ್ಷದ ಮೇನಲ್ಲಿ ಚೀನಾವು ಬಹುರಾಷ್ಟ್ರೀಯ ನೌಕಾ ಸಮರಾಭ್ಯಾಸ ನಡೆಸಲು ಅಮೆರಿಕವನ್ನು ಆಹ್ವಾನಿಸಿತ್ತು. ಅಮೆರಿಕ ಈ ಆಹ್ವಾನವನ್ನು ತಿರಸ್ಕರಿಸಿತ್ತು. ಆದರೆ, ಇದೇ ಜೂನ್‌ನಲ್ಲಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್‌ ಮ್ಯಾಟ್ಟಿಸ್‌ ಚೀನಾಗೆ ಭೇಟಿ ನೀಡಿದ್ದರು. 2014ರ ನಂತರ ಚೀನಾಗೆ ಭೇಟಿ ನೀಡಿದ  ಅಮೆರಿಕದ ಮೊದಲ ರಕ್ಷಣಾ ಕಾರ್ಯದರ್ಶಿ ಜಿಮ್‌. 

ಚೀನಾದ ಬಾಹ್ಯಾಕಾಶ ಕಾರ್ಯಕ್ರಮವೂ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಪೆಂಟಗನ್ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ದೇಶದ ಸೇನೆಯ ಆರನೇ ಅಂಗವಾಗಿ ‘ಬಾಹ್ಯಾಕಾಶ ಪಡೆ’ಯನ್ನು 2020ರ ವೇಳೆಗೆ ಅಭಿವೃದ್ಧಿ ಪಡಿಸುವುದಾಗಿ ಇದೇ ತಿಂಗಳ ಪ್ರಾರಂಭದಲ್ಲಿ ಘೋಷಿಸಿದ್ದರು. 

ವಾಷಿಂಗ್ಟನ್‌ನಲ್ಲಿನ ಚೀನಾ ರಾಯಭಾರ ಕಚೇರಿ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !