ಮಂಗಳವಾರ, ನವೆಂಬರ್ 12, 2019
21 °C

ಕೈಕೊಟ್ಟು ಓಡಿದ ಅಮೆರಿಕ ಸೇನೆಗೆ ಕೊಳೆತ ಆಲೂಗಡ್ಡೆಯಲ್ಲಿ ಹೊಡೆದ ಸಿರಿಯಾ ಜನ

Published:
Updated:

ಕೊಳೆತ ಆಲೂಗೆಡ್ಡೆ, ಟೊಮೆಟೊ, ಕೋಳಿಮೊಟ್ಟೆ... ಹೀಗೆ ಕೆಟ್ಟ ವಾಸನೆ ಬರುವ, ಮುಟ್ಟಲು ಅಸಹ್ಯವಾಗುವ ಏನು ಸಿಕ್ಕರೂ ಆ ಜನರು ಒಟ್ಟುಗೂಡಿಸಿ ಇರಾಕ್‌ನತ್ತ ತೆರಳುತ್ತಿದ್ದ ಅಮೆರಿಕದ ಸೇನಾ ವಾಹನಗಳ ಮೇಲೆ ತೂರುತ್ತಿದ್ದರು. ವಾಹನಗಳಿಗೆ ಅಡ್ಡ ಹೋಗಿ ಅದರೊಳಗಿದ್ದ ಸೈನಿಕರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದರು. ಅವರಲ್ಲಿ ಬೇಸರವಾಗಿತ್ತು, ಅದಕ್ಕಿಂತ ಮುಖ್ಯವಾಗಿ ನಂಬಿಸಿ ಬೆನ್ನಿಗೆ ಚೂರಿ ಇರಿದ ಆಕ್ರೋಶವಿತ್ತು.

ಅಮೆರಿಕ ಸೇನೆ ಇಂಥ ಮುಜುಗರದ ಪರಿಸ್ಥಿತಿ ಎದುರಿಸಿದ್ದು ಇದೇ ಮೊದಲು. ಸಿರಿಯಾಗೆ ಬಂದಾಗ ಬೀದಿ ಬದಿ ನಿಂತು ಕೈಬೀಸಿ ಸ್ವಾಗತಿಸಿದ್ದ ಅದೇ ನಾಗರಿಕರು ಇಂದು ಸಿರಿಯಾದಿಂದ ಹೊರಡುವಾಗ ಸಿಕ್ಕಿದ್ದು ತೆಗೆದುಕೊಂಡು ಹೊಡೆಯುತ್ತಿದ್ದಾರೆ. ‘ನಾಲಾಯಕ್ ಸ್ವಾರ್ಥಿಗಳು’ ಎಂದು ಬಾಯಿಗೆ ಬಂದಂತೆ ತೆಗಳುತ್ತಿದ್ದಾರೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

‘ಸಿರಿಯಾದಲ್ಲಿ ನಮ್ಮ ಸೇನೆ ಇದ್ದಿದ್ದು ಜನರ ಜೀವ ಕಾಪಾಡಲು ಅಲ್ಲ. ತೈಲ ಸಂಪನ್ಮೂಲ ಕಾಪಾಡಲು. ಯಾರು ಯಾರ ಜೊತೆಗೆ ಕಿತ್ತಾಡಿಕೊಂಡು ನಮಗೇನಾಗಬೇಕು. ನಮಗೆ ಸಿಗಬೇಕಾದ್ದು ಸಿಕ್ಕರೆ ಸಾಕು’ ಎಂಬರ್ಥದಲ್ಲಿ ಅಮೆರಿಕ ಸೇನೆಯ ಮಹಾದಂಡನಾಯಕರೂ ಆಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಮವಾರ ಮಾತನಾಡಿರುವುದು ಸಿರಿಯಾ ಜನರನ್ನು ಕೆರಳಿಸಿದೆ.

ಇದನ್ನೂ ಓದಿ: ಸಿರಿಯಾ ಮೇಲೆ ಟರ್ಕಿ ದಾಳಿ: ಭಾರತ ಆಕ್ಷೇಪ


ಸಿರಿಯಾದ ಖುಮಿಶ್ಲಿ ನಗರದಲ್ಲಿ ಅಮೆರಿಕ ಸೇನಾ ವಾಹನದ ಮೇಲೆ ಕೊಳೆತ ಆಲೂಗಡ್ಡೆ ತೂರುತ್ತಿರುವ ಜನ

ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಉಗ್ರರ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕುರ್ದ್‌ ಜನಾಂಗ ಇದೀಗ ಅಮೆರಿಕದ ಮಿತ್ರದ್ರೋಹದಿಂದ ಕೆಂಡಾಮಂಡಲವಾಗಿದೆ. ಅಮೆರಿಕ ಸೇನೆಗೆ ಹೆಗಲುಕೊಟ್ಟು ಕೆಲಸ ಮಾಡಿದ್ದ, ಜೀವತೆತ್ತಿದ್ದ ಕುರ್ದಿಶ್ ಪಡೆಗಳನ್ನು ಮಟ್ಟಹಾಕಲು ಇದೀಗ ಟರ್ಕಿ ಸೇನೆ ಸಿರಿಯಾ ಮೇಲೆ ದಾಳಿ ಆರಂಭಿಸಿದೆ. ಬೀದಿಬೀದಿಗಳಲ್ಲಿ ಹೆಣಗಳು ಉರುಳುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ತಮ್ಮನ್ನು ಟರ್ಕಿಯ ಕೈಗೊಪ್ಪಿಸಿ ಅಮೆರಿಕ ಹಿಂದೆ ಸರಿಯುತ್ತಿರುವುದು ಅಲ್ಲಿನ ಜನರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಅಮೆರಿಕ ಸೇನೆಯ 100ಕ್ಕೂ ಹೆಚ್ಚು ಸಶಸ್ತ್ರ ವಾಹನಗಳು, ಲಾರಿಗಳು ಸೋಮವಾರ ಇರಾಕ್‌ನತ್ತ ಸಾಗಿದವು. ಸಿರಿಯಾದಲ್ಲಿ ಟರ್ಕಿ–ಕುರ್ದಿಷ್‌ ಪಡೆಗಳ ನಡುವೆ ನಡೆಯಲಿರುವ ನಿರ್ಣಾಯಕ ಸಂಘರ್ಷದ ತೀವ್ರತೆಗೆ ಭಯಪಟ್ಟು ನೂರಾರು ಕುಟುಂಬಗಳು ಕಾರಿನಲ್ಲಿ ಸುರಕ್ಷಿತ ತಾಣ ಹುಡುಕಿ ಹೊರಟಿರುವುದು ಕಂಡು ಬರುತ್ತಿತ್ತು. ‘ಇಂಥ ಅಸಹಾಯಕ ನಿರಾಶ್ರಿತರಿಗೂ, ಅದೇ ಸಂಘರ್ಷಕ್ಕೆ ಹೆದರಿ ಸಿರಿಯಾದಿಂದ ಓಡಿ ಹೋಗುತ್ತಿರುವ ಅಮೆರಿಕ ಸೇನೆಗೂ ಅಂಥ ವ್ಯತ್ಯಾಸ ಇಲ್ಲ’ ಎಂದು ಅಲ್ಲಿನ ಮಾಧ್ಯಮಗಳು ಲೇವಡಿ ಮಾಡಿವೆ.

ಇದನ್ನೂ ಓದಿ: ಗುರಿ ಮುಟ್ಟುವವರೆಗೆ ಸಿರಿಯಾ ಮೇಲಿನ ದಾಳಿ ನಿಲ್ಲದು ಎಂದ ಟರ್ಕಿ ಅಧ್ಯಕ್ಷ

ಜನರನ್ನು ಕಟ್ಟಿಕೊಂಡು ನಮಗೇನಾಗಬೇಕು

‘ಪೂರ್ವ ಸಿರಿಯಾದಲ್ಲಿ ನಮ್ಮ ಸೇನೆ ಇದ್ದುದು, ಮುಂದೆ ಇರುವುದು ತೈಲ ಸಂಪನ್ಮೂಲದ ಸಂರಕ್ಷಣೆಗೆ. ಅಲ್ಲಿನ ಜನರನ್ನು ಕಟ್ಟಿಕೊಂಡು ನಮಗೇನಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬಹಿರಂಗ ಹೇಳಿಕೆ ನೀಡಿದ್ದರು.

‘ನಮ್ಮ ಸೇನಾ ತುಕಡಿಯನ್ನು ಸಿರಿಯಾಗೆ ಕಳಿಸಿದ್ದೇ ತೈಲ ಸಂಪನ್ಮೂಲ ಕಾಪಾಡಲು. ಅಲ್ಲಿನ ಕುರ್ದ್‌ ಜನರನ್ನು, ನಾಗರಿಕತೆಯನ್ನು ರಕ್ಷಿಸಲು ನಾವು ಮಧ್ಯಪ್ರಾಚ್ಯ ದೇಶಗಳಲ್ಲಿ ಇರಬೇಕು ಎನ್ನುವ ಒಪ್ಪಂದವನ್ನು ಎಲ್ಲಿ ಮಾಡಿಕೊಂಡಿದ್ದೇವೆ?’ ಎಂದು ಟ್ರಂಪ್ ಜಾಣತನದಿಂದ ಪ್ರಶ್ನಿಸಿದ್ದರು.

ಇದನ್ನೂ ಓದಿ: ಸಿರಿಯಾದಲ್ಲಿ ಟರ್ಕಿ ಸೇನಾ ಕಾರ್ಯಾಚರಣೆ ಮುಂದುವರಿಕೆ

ಹಿಂದೆಯೂ ನಮ್ಮ ಉದ್ದೇಶ ಅದೇ ಆಗಿತ್ತು

‘ಈಶಾನ್ಯ ಸಿರಿಯಾದ ತೈಲ ಸಂಪನ್ಮೂಲ ಐಎಸ್‌ ಉಗ್ರರ ಹಿಡಿತಕ್ಕೆ ಸಿಗಬಾರದು ಎನ್ನುವ ಉದ್ದೇಶದಿಂದಲೇ ಈ ಹಿಂದೆ ನಮ್ಮ ಸಶಸ್ತ್ರಪಡೆಗಳು ಕುರ್ದ್‌ ಜನಾಂಗದ ಎಸ್‌ಡಿಎಫ್‌ (ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್‌) ಜೊತೆಗೆ ಕೈ ಜೋಡಿಸಿದ್ದವು’ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪೆರ್‌ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಆಡಳಿತದ ಉನ್ನತ ನಾಯಕತ್ವ ಹೀಗೆ ಬಹಿರಂಗವಾಗಿ, ಅಧಿಕೃತವಾಗಿಯೇ ‘ನಮಗೆ ಸಿಯಾ ಜನರಿಗಿಂತ ಅಲ್ಲಿರುವ ತೈಲ ಸಂಪನ್ಮೂಲವೇ ಮುಖ್ಯ. ಯಾವುದೇ ಜನಾಂಗ ಅಥವಾ ಜನರ ರಕ್ಷಣೆಗೆ ನಾವು ಬದ್ಧರಲ್ಲ’ ಎಂದು ಘೋಷಿಸಿರುವುದು ಕುರ್ದಿಷ್ ಪಡೆಗಳಲ್ಲಿ ಈಗಾಗಲೇ ಹೊಗೆಯಾಡುತ್ತಿದ್ದ ‘ಮೋಸಹೋದ’ ಭಾವಕ್ಕೆ ಹೊಸ ತುಪ್ಪ ಎರೆದಂತೆ ಆಗಿದೆ.

ಸಿಟ್ಟು ಬರೋದು ನ್ಯಾಯ ತಾನೆ?

‘ಈ ಹಾಳು ಅಮೆರಿಕದವರನ್ನು ನಂಬಿಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡಲು ನಮ್ಮ ಮಕ್ಕಳನ್ನು ಯುದ್ಧಭೂಮಿಗೆ ಕಳಿಸಿದ್ದೆವು. ಈಗ ನೋಡಿದ್ರೆ ತಮ್ಮ ಕೆಲಸವಾದ ತಕ್ಷಣ ನಮಗೆ ಕೈಕೊಟ್ಟು ಜಾಗ ಖಾಲಿ ಮಾಡ್ತಿದ್ದಾರೆ. ಮೋಸ ಮಾಡಿದವರು ಅದನ್ನು ಮರೆಯಬಹುದು. ಆದರೆ ನಾವು ಮೋಸ ಹೋದವರು. ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ’ ಎಂದು ಖುಮಿಷ್ಲಿಯಲ್ಲಿ ಚಿಲ್ಲರೆ ಆಂಗಡಿ ಇಟ್ಟುಕೊಂಡಿರುವ ಖಲೀಲ್ ಒಮಾರ್‌ ಸಿಟ್ಟು ಹೊರಹಾಕಿದರು. 

‘ಬೀದಿಬೀದಿಗಳಲ್ಲಿ ಜನರನ್ನು ಕೊಲ್ಲುತ್ತಿರುವವರು ಯಾರು ಅಂತ ಅಮೆರಿಕ ಸೇನೆಗೆ ಚೆನ್ನಾಗಿ ಗೊತ್ತು. ಆದರೂ ಅವರು ಎಲ್ಲದಕ್ಕೂ ಕುರುಡಾಗಿ ಓಡಿ ಹೋಗ್ತಿದ್ದಾರೆ. ನಮ್ಮ ಕಷ್ಟದ ಕಾಲದಲ್ಲಿ ಕೈಕೊಡುವವರನ್ನು ನಿಜವಾದ ಗೆಳೆಯರು ಅಂತ ಅಂದ್ಕೊಳ್ಳೋಕೆ ಆದೀತಾ’ ಎಂಬ ಅವರ ಪ್ರಶ್ನೆ ಸಾವಿರಾರು ಖುರ್ದ್‌ ಜನರದ್ದೂ ಹೌದು.

ಇದನ್ನೂ ಓದಿ: ಮರುಭೂಮಿ ಮೇಲೆ ಕಡುಕಪ್ಪು ಪತಾಕೆ

ಯಾಜಿದಿ ಜನಾಂಗಕ್ಕೆ ಎಸ್‌ಡಿಎಫ್‌ ಸಹ ಹೀಗೆಯೇ ಮಾಡಿತ್ತು

2014ರ ಆಗಸ್ಟ್‌ ತಿಂಗಳಲ್ಲಿ ಇಸ್ಮಾಮಿಕ್ ಸ್ಟೇಟ್ ಉಗ್ರರು ಇರಾಕ್‌ನ ಸಿಂಜರ್ ನಗರಕ್ಕೆ ಮುತ್ತಿಗೆಹಾಕಿ, ಅಲ್ಲಿದ್ದ ಯಾಜಿದಿ ಜನಾಂಗದ ಗಂಡಸರನ್ನು ಸಾಮೂಹಿಕ ಹತ್ಯೆಗೈದು, ಹೆಂಗಸರನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು ಹೊರಟರು. ಆಗ ಅಲ್ಲಿನ ಯಾಜಿದಿಗಳ ಇದೇ ಎಸ್‌ಡಿಎಫ್‌ (ಕುರ್ದಿಷ್ ಪಡೆಗಳು) ತಮ್ಮನ್ನು ಕಾಪಾಡುತ್ತದೆ ಎಂದು ನಂಬಿದ್ದರು. ಆದರೆ ದಾಳಿ ಆರಂಭವಾಗುವ ಕೆಲವೇ ಗಂಟೆಗಳು ಮೊದಲು ಎಸ್‌ಡಿಎಫ್‌ ಸಿಂಜರ್‌ನಿಂದ ಜಾಗ ಖಾಲಿ ಮಾಡಿತ್ತು. 

ಮುಂದಿನ ದಿನಗಳಲ್ಲಿ ಐಎಸ್‌ ಉಗ್ರರಿಂದ ಯಾಜಿದಿ ಜನಾಂಗದ ಮಹಿಳೆಯರು ಅನುಭವಿಸಿದ ಲೈಂಗಿಕ ಶೋಷಣೆ, ಸಾಮೂಹಿಕ ಅತ್ಯಾಚಾರದಂಥ ಘೋರ ಕೃತ್ಯಗಳಿಗೆ ಪರೋಕ್ಷವಾಗಿ ಎಸ್‌ಡಿಎಫ್‌ ಸಹ ಕಾರಣವಾಗಿತ್ತು.

 

ಪ್ರತಿಕ್ರಿಯಿಸಿ (+)