ಪತ್ರಕರ್ತ ಜಮಾಲ್‌ ಖಶೋಗ್ಗಿ ನಿಗೂಢ ಕಣ್ಮರೆ: ಅಮೆರಿಕ–ಸೌದಿ ತಿಕ್ಕಾಟ

7

ಪತ್ರಕರ್ತ ಜಮಾಲ್‌ ಖಶೋಗ್ಗಿ ನಿಗೂಢ ಕಣ್ಮರೆ: ಅಮೆರಿಕ–ಸೌದಿ ತಿಕ್ಕಾಟ

Published:
Updated:
Deccan Herald

ಇಸ್ತಾನ್‌ಬುಲ್: ಹತ್ಯೆಗೀಡಾಗಿದ್ದಾರೆ ಎಂದು ಶಂಕಿಸಲಾಗಿರುವ ರಿಯಾದ್‌ನ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರು ಒಂದು ವಾರದ ಹಿಂದೆ ಇಲ್ಲಿನ ಸೌದಿ ಅರೇಬಿಯಾದ ಕಾನ್ಸುಲ್ ಕಚೇರಿಗೆ ನಡೆದು ಹೋಗುತ್ತಿರುವ ತೀರಾ ಹತ್ತಿರದ ಚಿತ್ರವೊಂದನ್ನು ‘ವಾಷಿಂಗ್ಟನ್‌ ಪೋಸ್ಟ್‌’ ಮಂಗಳವಾರ ಪ್ರಕಟಿಸಿದೆ.

ಜಮಾಲ್‌ ಅವರನ್ನು ಕಾನ್ಸುಲ್ ಕಚೇರಿಯಲ್ಲೇ ಹತ್ಯೆ ಮಾಡಲಾಗಿದೆ ಎಂದು ಟರ್ಕಿ ಅಧಿಕಾರಿಗಳು ಆರೋಪಿಸಿದ್ದಾರೆ. ವಾಷಿಂಗ್ಟನ್ ಪೋಸ್ಟ್‌ನ ಅಂಕಣಕಾರರಾದ ಜಮಾಲ್‌ ಅವರು ನಿಗೂಢವಾಗಿ ಕಣ್ಮರೆಯಾಗಿರುವುದು ಅಮೆರಿಕ ಮತ್ತು ಸೌದಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಜಮಾಲ್ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸೌದಿ ಅರೇಬಿಯಾ, ಇದು ಆಧಾರರಹಿತವಾದ ಹೇಳಿಕೆ ಎಂದಿದೆ. ಕಾನ್ಸುಲ್‌ ಕಚೇರಿಯ ಒಳಗೆ ಹೋದ ಜಮಾಲ್ ಅವರು ಹೊರಗೆ ಬಂದಿದ್ದಾರೆ ಎಂಬುದನ್ನು ಸಾಬೀತು ಮಾಡುವ ಯಾವುದೇ ಸಾಕ್ಷ್ಯವನ್ನೂ ಸೌದಿ ಒದಗಿಸಿಲ್ಲ.

ವಾಷಿಂಗ್ಟನ್ ಪೋಸ್ಟ್‌ ಬಿಡುಗಡೆ ಮಾಡಿರುವ ಚಿತ್ರದಲ್ಲಿ ದಿನಾಂಕ ಸಹ ನಮೂದಾಗಿದೆ. ತನಿಖಾ ತಂಡದಲ್ಲಿನ ಆಪ್ತರೊಬ್ಬರು ಈ ಚಿತ್ರವನ್ನು ಹಂಚಿಕೊಂಡಿರುವುದಾಗಿ ಪತ್ರಿಕೆ ಹೇಳಿಕೊಂಡಿದೆ.

ಟರ್ಕಿ ಯುವತಿಯೊಬ್ಬರನ್ನು ವಿವಾಹವಾಗುವ ಸಂಬಂಧ ದಾಖಲೆಗಳಿಗಾಗಿ ಜಮಾಲ್ ಅವರು ಇಸ್ತಾನ್‌ಬುಲ್‌ ಕಾನ್ಸುಲ್‌ ಕಚೇರಿಗೆ ಹೋಗಿದ್ದರು. ಒಳ ಹೋದವರು ಹೊರಗೆ ಬಂದಿಲ್ಲ ಎಂದು ಅವರ ಭಾವಿ ಪತ್ನಿ ಆರೋಪಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಕಾನ್ಸುಲ್‌ ಕಚೇರಿ, ಜಮಾಲ್ ಅವರು ಕಚೇರಿಯಿಂದ ಹೊರನಡೆದಿದ್ದಾರೆ ಎಂದು ವಾದಿಸುತ್ತಿದೆ.

ಸ್ವಯಂ ಗಡೀಪಾರಿಗೆ ಒಳಗಾಗಿರುವ ಜಮಾಲ್‌ ಅವರು ಕಳೆದ ವರ್ಷದಿಂದ ಅಮೆರಿಕದಲ್ಲಿ ವಾಸವಿದ್ದಾರೆ.

ಯೆಮನ್‌ ನಾಗರಿಕರ ಮೇಲೆ ಸೌದಿ ನಡೆಸುತ್ತಿರುವ ಯುದ್ಧ ಸೇರಿದಂತೆ ಸೌದಿ ರಾಜಕುಮಾರರ ನಡೆಯನ್ನು ಜಮಾಲ್‌ ತಮ್ಮ ಅಂಕಣದಲ್ಲಿ ತೀವ್ರವಾಗಿ ಟೀಕಿಸಿ ಬರೆಯುತ್ತಿದ್ದರು.

ಜಮಾಲ್‌ ಅವರು ಕಾನ್ಸುಲ್‌ ಕಚೇರಿಯನ್ನು ಬಿಟ್ಟು ಹೊರನಡೆದಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ನೀಡುವಂತೆ ಟರ್ಕಿ ಅಧ್ಯಕ್ಷ ರಿಸೆಪ್‌ ತೈಯ್ಯಪ್‌ ಎರ್ಡೊಗನ್ ಅವರು ಸೌದಿ ಸರ್ಕಾರವನ್ನು ಕೋರಿದ್ದಾರೆ.

ಈ ನಡುವೆ, ಜಮಾಲ್‌ ಅವರನ್ನು ಅಪಹರಿಸಿ ವಿಮಾನದಲ್ಲಿ ಕರೆದೊಯ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತಪಾಸಣೆಗೆ ಸೌದಿ ಒಪ್ಪಿಗೆ

‌ಅಂಕಾರ (ಎಎಫ್‌ಪಿ): ಇಸ್ತಾನ್‌ಬುಲ್‌ನ ಕಾನ್ಸುಲ್‌ ಕಚೇರಿಯಲ್ಲಿ ಟರ್ಕಿ ಅಧಿಕಾರಿಗಳಿಗೆ ತಪಾಸಣೆ ನಡೆಸಲು ಸೌದಿ ಅರೇಬಿಯಾ ಒಪ್ಪಿಗೆ ನೀಡಿದೆ ಎಂದು ಟರ್ಕಿ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ.

ತನಿಖೆಗೆ ಅಮೆರಿಕ ಆಗ್ರಹ

ವಾಷಿಂಗ್ಟನ್ (ಪಿಟಿಐ): ಜಮಾಲ್ ಅವರ ನಿಗೂಢ ಕಣ್ಮರೆ ಕುರಿತು ಪಾರದರ್ಶಕ ತನಿಖೆ ನಡೆಸುವಂತೆ ಅಮೆರಿಕ ಆಗ್ರಹಿಸಿದೆ. ಜಮಾಲ್‌ ಅವರ ಇರವಿನ ಬಗ್ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದರು.

ಜಮಾಲ್‌ ಅವರ ಬಗ್ಗೆ ಗೊಂದಲಕಾರಿ ವರದಿಗಳನ್ನು ನೋಡುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !