ಭಾನುವಾರ, ನವೆಂಬರ್ 17, 2019
28 °C

ಹಿಂಸಾಚಾರಕ್ಕೆ ತಿರುಗಿದ ಹಾಂಗ್‌ಕಾಂಗ್‌ ಪ್ರತಿಭಟನೆ

Published:
Updated:
Prajavani

ಹಾಂಗ್‌ಕಾಂಗ್‌: ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಸಂಸದರ ಬಂಧನ ಖಂಡಿಸಿ ಭಾನುವಾರ ಇಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಶಾಪಿಂಗ್‌ ಮಾಲ್‌ ಮತ್ತು ಸಬ್‌ವೇ ನಿಲ್ದಾಣದ ಕಿಟಕಿಗಳಿಗೆ ಪ್ರತಿಭಟನಕಾರರು ಹಾನಿಯೆಸಗಿದ್ದಾರೆ.

ಅಂಗಡಿಗಳಿಗೆ ಹಾನಿ ಎಸಗಿರುವ ಆರೋಪದ ಮೇಲೆ ಒಬ್ಬ ಮಹಿಳೆ ಹಾಗೂ ನಾಲ್ವರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಂಗ್‌ಕಾಂಗ್‌ನ ಸ್ವಾಯತ್ತತೆಗೆ ಧಕ್ಕೆ ತರಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರಿ ಲ್ಯಾಮ್‌ ಅವರಿಂದ ಮತ್ತು ಚೀನಾದಿಂದ ಪ್ರಯತ್ನ ನಡೆಯು ತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಶಂಕಿತ ಅಪರಾಧಿಗಳನ್ನು ವಿಚಾರಣೆ ಗಾಗಿ ಚೀನಾ ಮೇನ್‌ ಲ್ಯಾಂಡ್‌ಗೆ ಹಸ್ತಾಂತರಿಸುವ ವಿವಾದಾತ್ಮಕ ಮಸೂದೆಯ ಕುರಿತು ಚರ್ಚಿಸಲು ಮೇ 11ರಂದು ಹಮ್ಮಿಕೊಂಡಿದ್ದ ಸಭೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಆರು ಮಂದಿ ಸಂಸದರನ್ನು ಇತ್ತೀಚೆಗೆ ಬಂಧಿಸಿ ರುವುದಾಗಿ ಶನಿವಾರ ಪೊಲೀಸರು ಘೋಷಿಸಿದ್ದರು.

ಮುಂಬರುವ ಚುನಾವಣೆಯನ್ನು ಮುಂದೂಡುವುದಕ್ಕೆ ಅಥವಾ ರದ್ದುಗೊಳಿಸುವುದಕ್ಕಾಗಿ ಸರ್ಕಾರ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಈ ಸಂಸದರು ಟೀಕಿಸಿದ್ದರು.

‘ಕಠಿಣ ಭದ್ರತಾ ಕಾನೂನು ಅಗತ್ಯ’
ಬೀಜಿಂಗ್‌:
ಹಾಂಗ್‌ಕಾಂಗ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯಲು ಕಠಿಣ ಭದ್ರತಾ ಕಾನೂನುಗಳ ಕೊರತೆಯೇ ಕಾರಣ ಎಂದು ಚೀನಾ ಹೇಳಿದೆ.

ಇಂತಹ  ಕಾನೂನನ್ನು ತುರ್ತಾಗಿ ರಚಿಸುವ ಅಗತ್ಯ ಇದೆ ಎಂದು ಹಾಂಗ್‌ಕಾಂಗ್‌ನ ಮೇಲ್ವಿಚಾರಣೆ ನಡೆಸುವ ಚೀನಾದ ಸರ್ಕಾರಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)