ಮಂಗಳವಾರ, ಫೆಬ್ರವರಿ 25, 2020
19 °C
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದ ಕಾಂಗ್ರೆಸ್ ಅಧ್ಯಕ್ಷ

ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಭಾಗಿಯಾಗಿಲ್ಲ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಲಂಡನ್: ‘1984ರ ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಭಾಗಿಯಾಗಿರಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಬ್ರಿಟನ್ ಸಂಸದರು ಮತ್ತು ಸ್ಥಳೀಯ ರಾಜಕೀಯ ನಾಯಕರ ಜತೆ ನಡೆದ ಸಂವಾದದಲ್ಲಿ ರಾಹುಲ್ ಈ ಮಾತು ಹೇಳಿದ್ದಾರೆ.

1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಗುಂಡಿಕ್ಕಿ ಕೊಂದಿದ್ದರು. ಅಂಗರಕ್ಷಕರು ಸಿಖ್ಖರಾಗಿದ್ದ ಕಾರಣ, ಆಗ ದೇಶದ ವಿವಿಧೆಡೆ ಕಂಡಕಂಡಲ್ಲಿ ಸಿಖ್ಖರನ್ನು ಕೊಲ್ಲಲಾಗಿತ್ತು. ಆ ನರಮೇಧದಲ್ಲಿ 3,000ಕ್ಕೂ ಹೆಚ್ಚು ಸಿಖ್ಖರು ಬಲಿಯಾಗಿದ್ದರು.

‘ಆ ನರಮೇಧ ದೊಡ್ಡ ದುರಂತವೇ ಸರಿ. ಆದರೆ ಅದರಲ್ಲಿ ಕಾಂಗ್ರೆಸ್ ಭಾಗಿಯಾಗಿತ್ತು ಎಂಬುದನ್ನು ಮಾತ್ರ ನಾನು ಒಪ್ಪುವುದಿಲ್ಲ. ಹಿಂಸಾಚಾರ ಹಿಂಸಾಚಾರವೇ. ಯಾರ ವಿರುದ್ಧ ನಡೆದರೂ ಅದು ತಪ್ಪು. ಈ ನರಮೇಧಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಅದರಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ನಾನು ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇನೆ. ಅದರಲ್ಲಿ ನನ್ನ ನಿಲುವು ಸ್ಪಷ್ಟ’ ಎಂದು ರಾಹುಲ್ ಹೇಳಿದ್ದಾರೆ.

‘ಹಿಂಸಾಚಾರದ ಬಿಸಿ ತಾಗದವರಿಗೆ ಅದು ಹೇಗಿರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಸಿನಿಮಾಗಳಲ್ಲಿ ತೋರಿಸುವ ಹಿಂಸಾಚಾರವನ್ನೇ ಅಂತಹವರು ನಿಜ ಅಂದುಕೊಂಡಿರುತ್ತಾರೆ. ಆದರೆ ಹಿಂಸಾಚಾರ ಆ ರೀತಿ ಇರುವುದಿಲ್ಲ. ನಾನೂ ಹಿಂಸಾಚಾರದ ಬಲಿಪಶು. ನಾನು ತುಂಬಾ ಪ್ರೀತಿಸಿದವರು ಹಿಂಸಾಚಾರಕ್ಕೆ ಬಲಿಯಾಗಿದ್ದನ್ನು ನೋಡಿದ್ದೇನೆ. ನನ್ನ ತಂದೆಯನ್ನು ಕೊಲ್ಲಿಸಿದ ಎಲ್‌ಟಿಟಿಇ ಪ್ರಭಾಕರನ್‌ನ ಸತ್ತದ್ದನ್ನೂ ನಾನು ನೋಡಿದ್ದೇನೆ. ಶ್ರೀಲಂಕಾದ ಜಾಫ್ನಾ ಕಡಲತೀರದಲ್ಲಿ ಪ್ರಭಾಕರನ್‌ನ ದೇಹ ಬಿದ್ದಿದ್ದ ರೀತಿಯನ್ನು ನೋಡಿದ್ದೇನೆ. ಅವನ ಜಾಗದಲ್ಲಿ ನನ್ನ ತಂದೆಯನ್ನು, ಅವನ ಮಕ್ಕಳ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಂಡಿದ್ದರಿಂದ ಆತನ ಸಾವಿನ ಬಗ್ಗೆ ನನಗೆ ಬೇಸರವಾಗುತ್ತದೆ. ಹಿಂಸಾಚಾರದ ಬಿಸಿ ತಟ್ಟಿದಾಗ ಮಾತ್ರ ಅದರ ತೀವ್ರತೆ ಗೊತ್ತಾಗುತ್ತದೆ. ಅದು ಬೀರುವ ಪರಿಣಾಮವೇ ಬೇರೆ’ ಎಂದು ಅವರು ಹೇಳಿದ್ದಾರೆ.

‘ಗಾಯಕ್ಕೆ ಉಪ್ಪು ಸವರಿದ ರಾಹುಲ್’

ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಭಾಗಿಯಾಗಿರಲಿಲ್ಲ ಎಂಬ ರಾಹುಲ್ ಗಾಂಧಿಯ ಹೇಳಿಕೆಗೆ ಪಂಜಾಬ್‌ನ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಆಕ್ಷೇಪ ವ್ಯಕ್ತಪಡಿಸಿದೆ.

‘ಸಿಖ್‌ ಸಮುದಾಯಕ್ಕೆ ಆಗಿರುವ ಗಾಯಕ್ಕೆ ರಾಹುಲ್ ಗಾಂಧಿ ಉಪ್ಪು ಸವರಿದ್ದಾರೆ. ಸಿಖ್ಖರ ಬಗ್ಗೆ ಅವರ ಮನಸ್ಥಿತಿಯನ್ನು ಈ ಹೇಳಿಕೆ ಪ್ರತಿಬಿಂಬಿಸುತ್ತದೆ’ ಎಂದು ಎಸ್‌ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು