ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರಿಗೆ ಮಾಜಿ ಶಾಸಕ ಕೆ.ಎಂ.ಕೆ. ಕೊಡುಗೆ ಅಪಾರ

ರಕ್ತದಾನ ಶಿಬಿರ: ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‍.ಮಹೇಶ್ ಒಡೆಯರ್‍ ಹೇಳಿಕೆ
Last Updated 28 ಮೇ 2018, 10:33 IST
ಅಕ್ಷರ ಗಾತ್ರ

ಕಡೂರು: ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರದು ಎಂದೂ ಮರೆಯಲಾಗದ ವ್ಯಕ್ತಿತ್ವ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‍.ಮಹೇಶ್ ಒಡೆಯರ್‍ ಅಭಿಪ್ರಾಯಪಟ್ಟರು.

ಕಡೂರಿನ ಕನ್ನಡ ಭವನದಲ್ಲಿ ಭಾನುವಾರ ದಿ.ಕೆ.ಎಂ.ಕೃಷ್ಣಮೂರ್ತಿಯವರ 69ನೇ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘4 ಅವಧಿಗೆ ಶಾಸಕರಾಗಿದ್ದ ಕೃಷ್ಣಮೂರ್ತಿ ಅವರ ನಿಧನಾನಂತರ ಮೂರು ಚುನಾವಣೆಗಳು ನಡೆದಿದ್ದು, ಕೃಷ್ಣಮೂರ್ತಿಯವರ ವಿಚಾರವೇ ಪ್ರಮುಖ ವಿಷಯವಾಗಿತ್ತು. ಅದರರ್ಥ ನಿಧನ ನಂತರವೂ ಕೃಷ್ಣಮೂರ್ತಿಯವರು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಅವಧಿಯಲ್ಲಿ ಮಾಡಿದ ಕಾರ್ಯಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರ ಸ್ಮರಣೆಯಲ್ಲಿ ಗ್ರಂಥವೊಂದನ್ನು ಪ್ರಕಟಿಸುವ ಕಾರ್ಯವನ್ನು ಅವರ ಅಭಿಮಾನಿಗಳು ಮಾಡಲು ಮುಂದಾಗಬೇಕು. ಜಿಲ್ಲೆಯಲ್ಲಿ ಅಹಿಂದ ವರ್ಗದ ನಾಯಕನಾಗಿದ್ದ ಕೆ.ಎಂ.ಕೆ. ನಿಧನಾನಂತರ ಬಹುಶಃ ನಾಯಕತ್ವವಿಲ್ಲದಂತಾಗಿದೆ’ ಎಂದರು.

ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ‘ಜಾತಿರಹಿತ ಪ್ರೀತಿ ರಾಜಕಾರಣ ಮಾಡಿದ್ದ ಕೆ.ಎಂ.ಕೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಕನಸು ಕಂಡು ಅದರಲ್ಲಿ ಯಶಸ್ವಿಯೂ ಆಗಿದ್ದರು. ಎಲ್ಲ ವರ್ಗದ ಜನರ ಪ್ರೀತಿ ಪಡೆದಿದ್ದ, ಎಲ್ಲರೂ ಒಪ್ಪಿಕೊಂಡಿದ್ದ ಜನನಾಯಕರಲ್ಲಿ ಕೆ.ಎಂ.ಕೃಷ್ಣಮೂರ್ತಿ ಪ್ರಾತಃ ಸ್ಮರಣೀಯರು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ‘ನಮ್ಮ ತಂದೆಯವರ ಜನ್ಮದಿನವನ್ನು ಪ್ರತಿವರ್ಷವೂ ಸಾಮಾಜಿಕ ಕಳಕಳಿಯಿಂದ ಮಾಡುತ್ತಿದ್ದು, ಇದೀಗ ಕೆ.ಎಂ.ಕೆ.ಚಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಲಿದ್ದು, ಅದರ ಮೂಲಕ ಕೆ.ಎಂ.ಕೆ.ಅವರ ಆಶಯ
ಗಳನ್ನು ಸಾಕಾರಗೊಳಿಸುವಲ್ಲಿ ಮುಂದಾಗುತ್ತೇವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಮಾತನಾಡಿ, ಕಡೂರಿನಲ್ಲಿ ಮರೆಯಲಾಗದ ರಾಜಕಾರಣಿಯಾಗಿ ತಮ್ಮದೇ ಛಾಪು ಮೂಡಿಸಿದ್ದ ಕೃಷ್ಣಮೂರ್ತಿಯವರ ನೆರಳಿನಲ್ಲಿಯೇ ನಮ್ಮ ಕುಟುಂಬವೂ ಸಾಗುತ್ತಲಿದೆ ಎಂದರು.

ಕೆ.ಎಂ.ಕೃಷ್ಣಮೂರ್ತಿಯವರ ಪತ್ನಿ ಸುಜಾತ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಿಬಾಯಿ, ಪುರಸಭೆ ಸದಸ್ಯರಾದ ಬಷೀರ್‍ ಸಾಬ್, ಸೋಮಶೇಖರ್,‍ ವೈದ್ಯಾಧಿಕಾರಿ ಡಾ.ಉಮೇಶ್, ಮುಗಳೀಕಟ್ಟೆ ಲೋಕೇಶ್ ಇದ್ದರು. ಕೆ.ಎಂ.ಕೆ.ಸ್ಮರಣೆಯಲ್ಲಿ 35ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

**
ಕಡೂರಿನ ಪೊಲೀಸ್ ತರಬೇತಿ ಶಾಲೆ, ಜಿಟಿಟಿಸಿ, ಸ್ನಾತಕೋತ್ತರ ಕೇಂದ್ರ, ಬಸ್ ಡಿಪೋ ಮುಂತಾದೆಡೆ ಕೆ.ಎಂ.ಕೆ. ಅವರ ಭಾವಚಿತ್ರ ಹಾಕಿ ಅವರಿಗೆ ಗೌರವ ಸಲ್ಲಿಸಬೇಕು
ಮಹೇಶ್‌ ಒಡೆಯರ್‌, ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT