ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀತಿ ಇಲ್ಲದ ಜಾತಿ ರಾಜಕಾರಣ ಬೇಸರ ತರಿಸಿದೆ’

ನಿರ್ದಿಷ್ಟ ಕಾರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಜೆಡಿಯು ಬೆಂಬಲ ನೀಡಿದೆ–ತನ್ವೀರ್‌
Last Updated 4 ಮೇ 2018, 12:30 IST
ಅಕ್ಷರ ಗಾತ್ರ

ಕುಂದಾಪುರ: ‘ಕೆಲವೊಂದು ನಿರ್ದಿಷ್ಟ ಕಾರಣಗಳಿಂದ ಸಂಯುಕ್ತ ಜನತಾದಳ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್‌ ಅವರಂತೆ ಭ್ರಷ್ಟಾಚಾರದ ಆರೋಪ ಗಳನ್ನು ಹೊತ್ತಿರುವ ಇಲ್ಲಿನ ಕೆಲವು ಬಿಜೆಪಿಯ ನಾಯಕರು ಜೈಲಿಗೆ ಹೋಗಿ, ಬರುವುದು ಮಾಮೂಲಿ ಯಾಗಿದೆ’ ಎಂದು ರಾಷ್ಟ್ರೀಯ ಜೆಡಿಯು ಪ್ರಧಾನ ಕಾರ್ಯದರ್ಶಿ ತನ್ವೀರ್‌ ಅಖ್ತರ್‌ ಲೇವಡಿ ಮಾಡಿದರು.

‘ರಾಷ್ಟ್ರಕ್ಕೆ ಸಮಾಜವಾದದ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದ ರಾಮ ಮನೋಹರ್ ಲೋಹಿಯಾ, ಜಾರ್ಜ್‌ ಫೆರ್ನಾಂಡಿಸ್‌ ಅವರಂತಹ ನಾಯಕರು ಕಂಡ ಕನಸುಗಳನ್ನು ನಿತೀಶ್‌ಕುಮಾರ್‌ ನನಸು ಮಾಡುವ ಪ್ರಯತ್ನ ಮಾಡು ತ್ತಿದ್ದಾರೆ. ಪಕ್ಷದ ಸಿದ್ಧಾಂತಗಳನ್ನು ಪಾಲಿ ಸದೇ ವಿರುದ್ಧವಾಗಿ  ಬೆಳೆದವರಿಗೆ ಮಣೆಹಾಕುವ ಸಂಸ್ಕೃತಿ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚಾಗುತ್ತಿರುವುದರಿಂದ ಹಿರಿಯ ನಾಯಕರುಗಳು ಪಕ್ಷದಿಂದ ದೂರಾಗುತ್ತಿದ್ದಾರೆ. ದೇಶದ ಜನರ ವಿಶ್ವಾಸಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ಭವಿಷ್ಯದ ದಿನಗಳಲ್ಲಿ ಇನ್ನೂ ಕಡಿಮೆ ಸ್ಥಾನಗಳನ್ನು ಗಳಿಸಲಿದೆ’ ಎಂದು ಕುಂದಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಧರ್ಮ ಹಾಗೂ ಅಧರ್ಮದ ರಾಜಕೀಯ ಯುದ್ಧದಲ್ಲಿ ಧರ್ಮ ಜಯಿಸಲಿದೆ ಎನ್ನುವ ಇಲ್ಲಿನ ರಾಜ ಕೀಯ ಪ್ರಮುಖರೊಬ್ಬರ ಹೇಳಿಕೆ ಕೇಳಿದ್ದೇನೆ. ಆದರೆ, ಜೆಡಿಯು ಪಕ್ಷ ಕರ್ಮದಿಂದ ಸಂತೃಪ್ತಿ ಹೊಂದುವ ಬದ್ಧತೆ ಹೊಂದಿದೆ. ಕರ್ಮಯದ್ಧದಲ್ಲಿ ಜಯವಿದೆ ಎನ್ನುವ ಧರ್ಮಗ್ರಂಥಗಳ ಉಲ್ಲೇಖದ ಬಗ್ಗೆ ನಮಗೆ ವಿಶ್ವಾಸ ಇರುವುದರಿಂದ ಕೆಲಸ ಹಾಗೂ ಅಭಿವೃದ್ಧಿಯನ್ನು ಪೂಜಿಸುತ್ತೇವೆ. ಜೆಡಿಯು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಮದ್ಯ ನಿಷೇಧ ಹಾಗೂ ಬಾಲ್ಯ ವಿವಾಹ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ’ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ರಾಜೀವ್‌ ಕೋಟ್ಯಾನ್‌ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯ ನಂಟು ಬೆಳೆಸಿಕೊಂಡಿರುವ ನನಗೆ ಈ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಇದೆ. ಕುಂದಾ ಪುರ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಇಲ್ಲದ ಜಾತಿ ರಾಜಕಾರಣ ಕಂಡು ರೋಸಿ ಹೋಗಿ ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿದ್ದೇನೆ. ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. ಇಲ್ಲಿನ ದಕ್ಷ ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಚುನಾವಣಾ ಕ್ರಮಗಳ ಬಗ್ಗೆ ಮೆಚ್ಚುಗೆ ಇದೆ. ಇದೇ ಸ್ಥಿತಿ ಮುಂದುವರೆದರೆ ಚುನಾವಣೆಯ ಎರಡು ದಿನಗಳ ಹಿಂದೆ ನಡೆಯುವ ಹಣ ಹಾಗೂ ಇತರ ಪ್ರಭಾವಗಳು ಕಡಿಮೆಯಾಗಲಿದೆ. ಇದರಿಂದ ತನಗೆ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ಇದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ವಕ್ತಾರ ಬೇಹಳ್ಳಿ ನಾಗರಾಜ್‌, ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಪಿ.ಸತೀಶ್‌, ನಗರ ಸಮಿತಿ ಅಧ್ಯಕ್ಷ ಅಶೋಕ ಸಾರಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT