ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಸಂಖ್ಯೆಗಿಂತ ಗುಣಮಟ್ಟ ಮುಖ್ಯ: ಸಿ.ಎಂ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಷ್ಟು ಚಲನಚಿತ್ರಗಳನ್ನು ನಿರ್ಮಿಸಲಾಯಿತು ಎಂಬುದಕ್ಕಿಂತಲೂ ಎಷ್ಟು ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಲಾಯಿತು ಎನ್ನುವುದು ಹೆಚ್ಚು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂತಹ ಸಿನಿಮೋತ್ಸವಗಳು ಗುಣಮಟ್ಟದ ಸಿನಿಮಾ ನಿರ್ಮಾಣಕ್ಕೆ ನೆರವಾಗುತ್ತವೆ. ಅಲ್ಲದೆ, ನಮ್ಮ ಸರ್ಕಾರವು ಸಿನಿಮಾ ರಂಗದ ಎಲ್ಲ ಬೇಡಿಕೆಗಳನ್ನು ಈಡೇರಿಸಿದೆ’ ಎಂದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ನಾಲ್ಕು ಅಂತರರಾಷ್ಟ್ರೀಯ ಸಿನಿಮೋತ್ಸವಗಳು ರಾಜ್ಯದಲ್ಲಿ ನಡೆದಿವೆ. ಬೆಂಗಳೂರು ಸಿನಿಮೋತ್ಸವ ಮೊದಲು ಸಣ್ಣದೊಂದು ಜಾಗದಲ್ಲಿ ನಡೆಯುತ್ತಿತ್ತು. ಅದು ದೊಡ್ಡ ಮಟ್ಟಕ್ಕೆ ಏರಬೇಕು ಎಂಬ ಉದ್ದೇಶದಿಂದ, ವಿಧಾನಸೌಧದ ಎದುರು ಉದ್ಘಾಟನಾ ಸಮಾರಂಭ ಮತ್ತು ಮೈಸೂರು ಅರಮನೆ ಎದುರು ಸಮಾರೋಪ ಸಮಾರಂಭ ನಡೆಸಲಾಯಿತು’ ಎಂದು ನೆನಪಿಸಿಕೊಂಡರು.

ಸಿನಿಮಾ ಎಂಬುದು ಒಂದು ಮನೋರಂಜನೆಯ ಮಾಧ್ಯಮ ಮಾತ್ರವೇ ಅಲ್ಲ. ಅದು ವ್ಯಕ್ತಿತ್ವ ರೂಪಿಸುವ ಮಾಧ್ಯಮ ಕೂಡ ಹೌದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

ಪ್ರಶಸ್ತಿ ಮೊತ್ತ ಮರಳಿಸಿದ ಮಣಿರತ್ನಂ

ನಿರ್ದೇಶಕ ಮಣಿರತ್ನಂ ಅವರಿಗೆ ಜೀವಮಾನದ ಸಾಧನೆಗೆ ₹ 10 ಲಕ್ಷ ನಗದು ಇರುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿದ ಮಣಿರತ್ನಂ, ನಗದು ಬಹುಮಾನವನ್ನು ಮುಖ್ಯಮಂತ್ರಿಯವರಿಗೆ ಹಿಂದಿರುಗಿಸಿದರು.

‘ಈ ಮೊತ್ತವನ್ನು ಸಿನಿಮಾ ಮಾಡುವ ಯುವಕರ ನೆರವಿಗೆ ಬರುವ ರೀತಿಯಲ್ಲಿ ಬಳಸಿಕೊಳ್ಳಬೇಕು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ಈ ಹಣವನ್ನು ಯಾವ ಸಂಸ್ಥೆಯ ಮೂಲಕ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸಬೇಕು’ ಎಂದು ಮಣಿರತ್ನಂ ಹೇಳಿದರು.

ಸಿನಿಮೋತ್ಸವದ ಪ್ರಶಸ್ತಿ

* ಕನ್ನಡ ಸ್ಪರ್ಧಾ ವಿಭಾಗ

ಅತ್ಯುತ್ತಮ ಚಿತ್ರ: ರಿಸರ್ವೇಷನ್ (ನಿರ್ದೇಶನ: ನಿಖಿಲ್ ಮಂಜು)

ಎರಡನೆಯ ಅತ್ಯುತ್ತಮ ಚಿತ್ರ: ಮೂಡಲ ಸೀಮೆಯಲ್ಲಿ (ನಿ: ಕೆ. ಶಿವರುದ್ರಯ್ಯ)

ಮೂರನೆಯ ಅತ್ಯುತ್ತಮ ಚಿತ್ರ: ಅಲ್ಲಮ (ನಿ: ಟಿ.ಎಸ್. ನಾಗಾಭರಣ)

* ನೆಟ್‌ಪ್ಯಾಕ್‌ ಅಂತರರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿ ಪಡೆದ ಕನ್ನಡ ಚಿತ್ರ

ಬೇಟಿ (ನಿರ್ದೇಶನ: ಪಿ. ಶೇಷಾದ್ರಿ)

* ಭಾರತೀಯ ಸ್ಪರ್ಧಾ ವಿಭಾಗ

ಚಿತ್ರ ಭಾರತಿ ಪ್ರಶಸ್ತಿ

ಅತ್ಯುತ್ತಮ ಕನ್ನಡ ಚಿತ್ರ: ಮಯೂರಾಕ್ಷಿ (ನಿ: ಅತನು ಘೋಷ್)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಇಶು (ನಿ: ಉತ್ಪಲ್ ಬೋರ್ಪುಜಾರಿ)

ಫಿಪ್ರೆಸ್ಕಿ ಇಂಡಿಯಾ – ಪಿ.ಕೆ. ನಾಯರ್ ಸ್ಮರಣಾರ್ಥ ಪ್ರಶಸ್ತಿ: ಟು ಲೆಟ್ (ನಿ: ಚೆಜಿಯಾನ್ ರಾ)

ಅತ್ಯುತ್ತಮ ಏಷ್ಯನ್‌ ಚಿತ್ರಕ್ಕೆ ನೆಟ್‌ಪ್ಯಾಕ್‌ ಪ್ರಶಸ್ತಿ

ಸಿನಿಮಾ: ಎಕ್ಸ್‌ಕವೇಟರ್‌ (ನಿ: ಜು–ಹ್ಯೋಂಗ್‌ ಲೀ)

* ಕನ್ನಡ ಜನಪ್ರಿಯ ಮನೋರಂಜನಾ ವಿಭಾಗದಲ್ಲಿ ಪ್ರಶಸ್ತಿ

ಅತ್ಯುತ್ತಮ ಚಿತ್ರ: ರಾಜಕುಮಾರ (ನಿ: ಸಂತೋಷ್ ಆನಂದರಾಮ್)

ಎರಡನೆಯ ಅತ್ಯುತ್ತಮ ಚಿತ್ರ: ಭರ್ಜರಿ (ನಿ: ಚೇತನ್ ಕುಮಾರ್)

ಮೂರನೆಯ ಅತ್ಯುತ್ತಮ ಚಿತ್ರ: ಒಂದು ಮೊಟ್ಟೆಯ ಕಥೆ (ನಿ: ರಾಜ್‌ ಬಿ. ಶೆಟ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT