ಭಾನುವಾರ, ಆಗಸ್ಟ್ 25, 2019
20 °C

ಸಿಡ್ನಿ: ಚಾಕುವಿನಿಂದ ದಾಳಿ– ಮಹಿಳೆ ಕೊಲೆ

Published:
Updated:

ಸಿಡ್ನಿ (ಪಿಟಿಐ): ಮಹಿಳೆಯನ್ನು ಕೊಲೆ ಮಾಡಿ, ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಚಾಕು ಹಿಡಿದುಕೊಂಡು ‘ಅಲ್ಲಾಹು ಅಕ್ಬರ್‌’ ಎಂದು ಕೂಗುತ್ತ ಜನರ ಮೇಲೆ ದಾಳಿ ನಡೆಸಲು ಯತ್ನಿಸಿದವನನ್ನು ಸಮೀಪದ ಕಟ್ಟಡದಲ್ಲಿದ್ದ ನಾಲ್ವರು ‘ಹೀರೊ’ಗಳಂತೆ ಬಂದು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಾಳಿಯಲ್ಲಿ  ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ. 21 ವರ್ಷದ ಮೆರ್ಟ್‌ ನೇಯ್‌ ಎಂಬಾತನೇ ಹುಚ್ಚುಚ್ಚಾಗಿ ರೇಗಾಡುತ್ತ ಚಾಕು ಹಿಡಿದು ಓಡಾಡಿದವನು. ಈತ ಮಾನಸಿಕ ಅಸ್ವಸ್ಥನಾಗಿದ್ದು, ಇದು ಯಾವುದೇ ಭಯೋತ್ಪಾದಕ ದಾಳಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಿಂಗ್‌ ಸ್ಟ್ರೀಟ್‌ನಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರಿನ ಬಾನೆಟ್‌ ಮೇಲಿಂದ ಜಿಗಿದು ಚಾಕು ತೋರಿಸುತ್ತ ಭಯದ ವಾತಾವರಣ ಸೃಷ್ಟಿಸಿದ್ದನ್ನು ಆಸ್ಟ್ರೇಲಿಯಾದ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.

‘ಇದೇ ಸ್ಟ್ರೀಟ್‌ನಲ್ಲಿ ಹೋಗುತ್ತಿದ್ದ 41 ವರ್ಷ ವಯಸ್ಸಿನ ಮಹಿಳೆ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತಕ್ಷಣವೇ ಅಲ್ಲಿಯೇ ಇದ್ದ ನಾಲ್ವರು ಈತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕುರ್ಚಿ ಹಾಗೂ ಹಾಲಿನ ಕ್ರೇಟ್‌ಗಳಿಂದ ಈತನ ಮೇಲೆ ದಾಳಿ ನಡೆಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ನ್ಯೂ ಸೌತ್‌ ವೇಲ್ಸ್‌ ಪೊಲೀಸರು ತಿಳಿಸಿದ್ದಾರೆ.

‘ಸಮೀಪದ ಅಪಾರ್ಟ್‌ಮೆಂಟ್‌ವೊಂದರಲ್ಲಿ 21 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಕೊಲೆಯನ್ನು ಬಂಧಿತನೇ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ’ ಎಂದು ನ್ಯೂ ಸೌತ್‌ ವೇಲ್ಸ್‌ ಪೊಲೀಸ್‌ ಆಯುಕ್ತ ಮಿಕ್‌ ಫುಲ್ಲರ್‌ ತಿಳಿಸಿದ್ದಾರೆ.

Post Comments (+)