ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ್‌ ರಾಜೀನಾಮೆಗೆ ಮಂಜು ಆಗ್ರಹ

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ: ಬಾಲಕೃಷ್ಣ ವಿರುದ್ಧ ವಾಗ್ದಾಳಿ
Last Updated 31 ಮಾರ್ಚ್ 2018, 9:45 IST
ಅಕ್ಷರ ಗಾತ್ರ

ರಾಮನಗರ: ‘ನನ್ನನ್ನು 420 ಎಂದು ಕರೆಯುವ ಎಚ್.ಸಿ. ಬಾಲಕೃಷ್ಣ ಮೊದಲು ತಾವು ಯಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸದ್ಯದಲ್ಲಿಯೇ ಲೋಕೋಪಯೋಗಿ ಇಲಾಖೆಯಲ್ಲಿನ ₹600 ಕೋಟಿ ಹಗರಣದ ತನಿಖೆ ದಾಖಲೆ ಬಿಡುಗಡೆ ಮಾಡಿ ಅವರ ಕರ್ಮಕಾಂಡ ಬಯಲು ಮಾಡುತ್ತೇನೆ’ ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್‌ ಎಚ್ಚರಿಸಿದರು.

‘ಅಧಿಕಾರ ದುರುಪಯೋಗ ಪಡಿಸಿಕೊಂಡು ನನ್ನ ಮೇಲೆ ಕೇಸು ಹಾಕಿಸಿದ್ದೇ ಬಾಲಕೃಷ್ಣ. ನಾನೇನು ಅವರಂತೆ ಗುತ್ತಿಗೆದಾರರು, ಅಧಿಕಾರಿಗಳ ಬಳಿ ಚಂದಾ ಎತ್ತುವ ಕೆಲಸ ಮಾಡಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ತಲೆ ಮಾರಿಕೊಂಡಿಲ್ಲ. ಜೆಡಿಎಸ್ ಅಭ್ಯರ್ಥಿಯಾದ ಕೂಡಲೇ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅವರಿಗೆ ನೈತಿಕತೆ ಇದ್ದಲ್ಲಿ ಸಹೋದರ ಅಶೋಕ್‌ರಿಂದಲೂ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಚ್‌.ಎಂ.ಕೃಷ್ಣಮೂರ್ತಿ ಅವರನ್ನು ಒಂದುಗೂಡಿಸುವ ಪ್ರಯತ್ನ ಮಾಡದೇ ಕಾಂಗ್ರೆಸ್ ಪರೋಕ್ಷವಾಗಿ ಬಾಲಕೃಷ್ಣ ಗೆಲುವಿಗೆ ಸಹಕರಿಸಿತ್ತು’ ಎಂದು ಆರೋಪಿಸಿದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಮಾತನಾಡಿ ‘ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದು, ಪಕ್ಷ ಸಂಘಟನೆಯ ಜೊತೆಗೆ ಮಾಗಡಿಯಲ್ಲಿ ಮಂಜು ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಮಂಜು ಮತ್ತು ನಾನು ಎದುರಾಳಿಗಳಾಗಿ ಕೆಲಸ ಮಾಡಬೇಕಾಯಿತು. ಆದರೆ ಈ ಚುನಾವಣೆಯಲ್ಲಿ ಒಂದೇ ತಾಯಿ ಮಕ್ಕಳಂತೆ ದುಡಿಯುತ್ತೇವೆ. ಯಾರೇನೇ ಹೇಳಿದರೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಇನ್ನು ಮುಂದೆ ಜೆಡಿಎಸ್‌ ಹಾಗೂ ಎಚ್.ಡಿ. ದೇವೇಗೌಡರಿಗೆ ನಿಷ್ಠನಾಗಿರುತ್ತೇನೆ’ ಎಂದರು.

ಇದಕ್ಕೂ ಮುನ್ನ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಸಿ. ಉಮೇಶ್‌, ರೈಡ್‌ ನಾಗರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ, ಶಶಿಕಲಾ, ಶೋಭಾ, ರಾಜಶೇಖರ್, ಜಯಕುಮಾರ್, ಅಜಯ್ ದೇವೇಗೌಡ, ಎಚ್‌.ಕೆ. ಲೋಕೇಶ್‌ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT