ಅಮೆರಿಕ ಎಸ್‌ಟಿಎ ಪಟ್ಟಿಗೆ ಭಾರತ

7
ಚೀನಾ ಜತೆ ವಾಣಿಜ್ಯ ಸಮರದ ಸೇಡು ತೀರಿಸಿಕೊಳ್ಳಲು ಹೊಸ ತಂತ್ರ ರೂಪಿಸಿದ ದೊಡ್ಡಣ್ಣ

ಅಮೆರಿಕ ಎಸ್‌ಟಿಎ ಪಟ್ಟಿಗೆ ಭಾರತ

Published:
Updated:

ವಾಷಿಂಗ್ಟನ್:  ಅಮೆರಿಕ ತನ್ನ ಪ್ರತಿಷ್ಠಿತ ‘ವಾಣಿಜ್ಯ ದೃಢೀಕರಣ ಪಟ್ಟಿ–1’ರಲ್ಲಿ (ಎಸ್‌ಟಿಎ–1) ಭಾರತಕ್ಕೆ ಸ್ಥಾನ ನೀಡಿದೆ. ಅಮೆರಿಕದಿಂದ ಸೇನಾ ಮತ್ತು ಭದ್ರತಾ ತಂತ್ರಜ್ಞಾನ ಎರವಲು ಪಡೆಯಲು ಮತ್ತು ಖರೀದಿಸಲು ಇದು ಭಾರತಕ್ಕೆ ನೆರವಾಗಲಿದೆ.

ಭಾರತವು ಈ ಪಟ್ಟಿಯಲ್ಲಿ ಸ್ಥಾನ ಪಡೆದ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಮತ್ತು ಏಷ್ಯಾದ ಮೂರನೇ ರಾಷ್ಟ್ರವಾಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಈಗಾಗಲೇ ಈ ಪಟ್ಟಿಯಲ್ಲಿವೆ.

ಚೀನಾ ಮತ್ತು ಅಮೆರಿಕದ ಮಧ್ಯೆ ಭುಗಿಲೆದ್ದಿರುವ ವಾಣಿಜ್ಯ ಸಮರದ ಭಾಗವಾಗಿ ಅಮೆರಿಕವು ಭಾರತಕ್ಕೆ ಈ ಸ್ಥಾನ ನೀಡಿದೆ ಎಂದು ಮೂಲಗಳು ಹೇಳಿವೆ. ಭಾರತಕ್ಕೆ ಈ ಸ್ಥಾನ ನೀಡುವುದರಿಂದ ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ವಾಣಿಜ್ಯ ಮತ್ತು ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅಮೆರಿಕ ತಿಳಿಸಿದೆ.

ಭಾರತವು ತನ್ನ ಸೇನಾ ಮತ್ತು ಭದ್ರತಾ ಸಾಮರ್ಥ್ಯವನ್ನು ಆಧುನೀಕರಿಸುತ್ತಿದೆ. ಈ ಸ್ಥಾನ ದೊರೆತದ್ದರಿಂದ ಆಧುನೀಕರಣ ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದು ಅಮೆರಿಕ ಆಶಯ ವ್ಯಕ್ತಪಡಿಸಿದೆ.

ಏನಿದು ಎಸ್‌ಟಿಎ–1 ಪಟ್ಟಿ?

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟ, ವಾಸೆನ್ನಾರ್ ಒಪ್ಪಂದ, ಆಸ್ಟ್ರೇಲಿಯಾ ಗ್ರೂಪ್‌ ಮತ್ತು ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯ ರಾಷ್ಟ್ರಗಳಿಗೆ ಮಾತ್ರ ಅಮೆರಿಕ ಈ ಸ್ಥಾನಮಾನ ನೀಡುತ್ತದೆ.

ವಿಶ್ವದ ಒಟ್ಟು 37 ರಾಷ್ಟ್ರಗಳು ಎಸ್‌ಟಿಎ–1 ಪಟ್ಟಿಯಲ್ಲಿವೆ. ಅವೆಲ್ಲವೂ ಅಮೆರಿಕದ ಜತೆ ಸುಲಭವಾಗಿ ರಕ್ಷಣಾ ಒಪ್ಪಂದ–ವ್ಯಾಪಾರ ನಡೆಸುವ ಅವಕಾಶ ಪಡೆದಿವೆ.

ಭಾರತವು ಎನ್‌ಎಸ್‌ಜಿ ಹೊರತುಪಡಿಸಿ ಉಳಿದ ಮೂರೂ ಒಕ್ಕೂಟಗಳ ಸದಸ್ಯ ರಾಷ್ಟ್ರವಾಗಿದೆ. ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯದಂತೆ ಚೀನಾ ಅಡ್ಡಗಾಲು ಹಾಕುತ್ತಲೇ ಇದೆ.

ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್‌ ಈ ನಾಲ್ಕೂ ಒಕ್ಕೂಟಗಳ ಸದಸ್ಯತ್ವ ಪಡೆದಿಲ್ಲ. ಹೀಗಾಗಿ ಅಮೆರಿಕವು ಇಸ್ರೇಲ್‌ಗೆ ಎಸ್‌ಟಿಎ–1 ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಆದರೆ, ಎನ್ಎಸ್‌ಜಿ ಸದಸ್ಯತ್ವ ಇಲ್ಲದಿದ್ದರೂ ಭಾರತಕ್ಕೆ ಅಮೆರಿಕ ಈ ಸ್ಥಾನಮಾನ ನೀಡಿದೆ.

ಬರಹ ಇಷ್ಟವಾಯಿತೆ?

 • 34

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !