ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಾಲಾ ಯೂಸುಫ್‌ಝೈ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲಿಬಾನಿ ಉಗ್ರ ಜೈಲಿನಿಂದ ಪರಾರಿ

Last Updated 7 ಫೆಬ್ರುವರಿ 2020, 5:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಅವರ ಮೇಲೆ 2012ರಲ್ಲಿ ದಾಳಿ ನಡೆಸಿದ್ದ ಮತ್ತು 2014ರಲ್ಲಿ ಪೇಶಾವರ ಸೈನಿಕ ಶಾಲೆ ಮೇಲೆ ಭಯೋತ್ಪಾದಕ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಆತನೇ ಬಿಡುಗಡೆ ಮಾಡಿದ್ದು ಎನ್ನಲಾದ ಆಡಿಯೊತುಣುಕು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸದ್ಯ ತಾನಿರುವ ಜಾಗದ ಕುರಿತು ಮಾಹಿತಿ ನೀಡದ ಇಹ್ಸಾನ್, ದೇವರ ಸಹಾಯದೊಂದಿಗೆ ನಾನು ಜನವರಿ 11ರಂದು ಭದ್ರತಾ ಪಡೆಗಳ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ತಾನು ಬಂಧನಕ್ಕೊಳಗಾಗಿದ್ದ ದಿನಗಳ ಕುರಿತು ಮತ್ತು ತನ್ನ ಮುಂದಿನ ಯೋಜನೆಗಳ ಬಗ್ಗೆ ವಿವರವಾದ ಹೇಳಿಕೆ ನೀಡುವುದಾಗಿ ತಿಳಿಸಿದ್ದಾನೆ.

ಫೆಬ್ರುವರಿ 5, 2017 ರಂದು ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನದ ಭದ್ರತಾ ಸಂಸ್ಥೆಗಳಿಗೆ ನಾನು ಶರಣಾಗಿದ್ದೆ.ಆದರೆ ಶರಣಾಗತಿಗೆ ಮುಂಚೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಭದ್ರತಾ ಪಡೆಗಳು ವಿಫಲವಾಗಿವೆ. ನಾನು ಸುಮಾರು ಮೂರು ವರ್ಷಗಳಿಂದಲೂ ಒಪ್ಪಂದವನ್ನು ಪಾಲಿಸಿದ್ದೇನೆ. ಆದರೆ ಈ ಚಾಣಾಕ್ಷ ಭದ್ರತಾ ಸಂಸ್ಥೆಗಳು ನನ್ನೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿ ನನ್ನ ಮಕ್ಕಳೊಂದಿಗೆ ನನ್ನನ್ನು ಜೈಲಿಗೆ ಹಾಕಿದವು. ಹೀಗಾಗಿಯೇ ನಾನು ಕೊನೆಗೆ ಜೈಲಿನಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದೆ.ಜನವರಿ 11 ರಂದು ಪಾಕ್ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾನೆ.

ಈ ಆಡಿಯೋದ ಅಧಿಕೃತತೆ ಮತ್ತು ನಿಖರತೆ ಕುರಿತು ಪಾಕ್ ಸೇನೆಯಾಗಲಿ ಅಥವಾ ಪಾಕ್ ಸರ್ಕಾರವಾಗಲಿ ಯಾವುದೇ ಪರಿಶೀಲನೆ ನಡೆಸಿಲ್ಲ.

22 ವರ್ಷದ ಮಲಾಲಾ ಯೂಸುಫ್‌ಝೈ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ 2012ರಲ್ಲಿ ಗುಂಡು ಹಾರಿಸಲಾಗಿತ್ತು.

2014, ಡಿಸೆಂಬರ್ 16ರಂದು ಪ್ಯಾರಾ ಮಿಲಿಟರಿ ಸೈನಿಕ ಸಮವಸ್ತ್ರ ಧರಿಸಿದ್ದ 8ರಿಂದ 10 ಭಯೋತ್ಪಾದಕ ದಾಳಿಕೋರರು ಪೇಶಾವರ ಸೈನಿಕ ಶಾಲೆಗೆ ಪ್ರವೇಶಿಸಿದ್ದರು. ಈ ವೇಳೆ ಪ್ರತಿ ಶಾಲೆಗೆ ನುಗ್ಗಿ ಮಕ್ಕಳ ಮೇಲೆ ನಿರ್ಧಾಕ್ಷಿಣ್ಯವಾಗಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಸುಮಾರು 132 ವಿದ್ಯಾರ್ಥಿಗಳು ಸೇರಿದಂತೆ 149 ಜನರ ಸಾವಿಗೆ ಕಾರಣರಾದವರಲ್ಲಿ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಕೂಡ ಒಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT