ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಯಲ್ಲಿ ಸಿಲುಕಿದ್ದವರು ಜೀವಂತ

ಸುದೀರ್ಘ ಕಾರ್ಯಾಚರಣೆ: 10 ದಿನಗಳ ಬಳಿಕ ಫುಟ್‌ಬಾಲ್‌ ತಂಡ ಪತ್ತೆ
Last Updated 3 ಜುಲೈ 2018, 19:57 IST
ಅಕ್ಷರ ಗಾತ್ರ

ಮಾ ಸೈ (ಥಾಯ್ಲೆಂಡ್‌): ಪ್ರವಾಹದಿಂದಾಗಿ ಗುಹೆಯಲ್ಲಿ ಹತ್ತು ದಿನಗಳಿಂದ ಸಿಲುಕಿಕೊಂಡಿದ್ದ ’ಥಾಯ್‌ ಯೂಥ್‌’ ಫುಟ್‌ಬಾಲ್ ತಂಡದ ಎಲ್ಲ 13 ಸದಸ್ಯರು ಜೀವಂತವಾಗಿರುವುದು ದೃಢಪಟ್ಟಿದೆ.

ಆದರೆ, ರಕ್ಷಣಾ ಕಾರ್ಯಾಚರಣೆ ಕಠಿಣ ಮತ್ತು ದೀರ್ಘಾವಧಿಯಾಗಬಹುದು. ಆಹಾರ ಮತ್ತು ಔಷಧವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ಬಾಲಕರು ಮತ್ತು ಅವರ ಫುಟ್‌ಬಾಲ್‌ ತರಬೇತುದಾರರನ್ನು ಸೋಮವಾರ ರಾತ್ರಿ ಪತ್ತೆ ಮಾಡಲಾಗಿದೆ. ಆದರೆ, ಗುಹೆಯಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಇರುವುದರಿಂದ ಎಲ್ಲರನ್ನು ಸುರಕ್ಷಿತವಾಗಿ ಕರೆತರುವುದು ಸಾಹಸದ ಕಾರ್ಯವಾಗಿದೆ.

‘ಇವರೆಲ್ಲರನ್ನೂ ಗುಹೆಯಿಂದ ಹೊರಗೆ ಕರೆತರಲು ವಾರಗಳು ಅಥವಾ ತಿಂಗಳುಗಳ ಕಾಲ ಬೇಕಾಗಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಬ್ರಿಟಿಷ್‌ ಮುಳುಗು ತಜ್ಞರಾದ ಜಾನ್‌ ವೊಲಾಂಥೇನ್‌ ಮತ್ತು ರಿಕ್‌ ಸ್ಟಾಂಟನ್‌ ಬಾಲಕರನ್ನು ಪತ್ತೆ ಮಾಡಿ ಅವರೊಂದಿಗೆ ಆಪ್ತ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.

ಇಂಗ್ಲಿಷ್‌ ಭಾಷೆಯಲ್ಲಿ ನಡೆಸಿರುವ ಅವರ ನಡುವಿನ ಸಂಭಾಷಣೆ ವಿವರ ಇಂತಿದೆ.

ರಕ್ಷಕ: ‘ಎಷ್ಟು ಜನ ಇದ್ದೀರಿ’?

ಬಾಲಕ:13

ರಕ್ಷಕ: ‘ಅದ್ಭುತ. ನೀವು ಇಲ್ಲಿ 10 ದಿನಗಳಿಂದ ಇದ್ದೀರಾ. ನೀವು ಬಹಳ ಗಟ್ಟಿಗರು’

ಬಾಲಕ: ಥ್ಯಾಂಕ್‌ ಯೂ

ಮತ್ತೊಬ್ಬ ಬಾಲಕ: ನಮಗೆ ಹೊಟ್ಟೆ ಹಸಿಯುತ್ತಿದೆ, ಊಟ ಬೇಕು. ಮೊದಲು ನಾವು ಇಲ್ಲಿಂದ ಹೊರ ಹೋಗಬೇಕು. ಯಾವಾಗ ಹೊರಗೆ ಹೋಗುವೆವು?

ರಕ್ಷಕ: ‘ನನಗೆ ಅರ್ಥವಾಗುತ್ತೆ. ಆದರೆ, ಇವತ್ತೇ ಅಲ್ಲ. ನೀವಿನ್ನೂ ಮುಳುಗಿ ಏಳಬೇಕಿದೆ!ನಮ್ಮೊಂದಿಗೆ ಇನ್ನೂ ಹಲವು ಮಂದಿ ರಕ್ಷಣೆಗೆ ಬರಲಿದ್ದಾರೆ. ಇಲ್ಲಿಂದ ಸುರಕ್ಷಿತವಾಗಿ ಹೊರಹೋಗಲು ವ್ಯವಸ್ಥೆ ಮಾಡುತ್ತೇವೆ’.

ನೌಕಾಪಡೆಯಿಂದ ಕಾರ್ಯಾಚರಣೆ: ಥಾಯ್ಲೆಂಡ್‌ನ ನೌಕಾಪಡೆ ‘ಸೀಲ್‌’ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಥಾಯ್‌ ನೌಕಾಪಡೆ ಟಾರ್ಚ್‌ ಬೆಳಕಿನಲ್ಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಪ್ರಕಟಿಸಿದ್ದು, ಕೆಂಪು ಮತ್ತು ನೀಲಿ ಬಣ್ಣದ ಶರ್ಟ್‌ಗಳಲ್ಲಿರುವ ಬಾಲಕರು ಬಂಡೆಗಳ ಮೇಲೆ ಕುಳಿತು ನೀರಿನಿಂದ ರಕ್ಷಣೆ ಪಡೆದಿದ್ದಾರೆ.

ಮುಳುಗು ತಜ್ಞರು ಗುಹೆಯ ಕಿರುದಾರಿಗಳಲ್ಲಿ ನುಸುಳಿ ಸುಮಾರು ನಾಲ್ಕು ಕಿಲೋ ಮೀಟರ್‌ ದೂರದಲ್ಲಿ ಸೋಮವಾರ ರಾತ್ರಿ ಬಾಲಕರನ್ನು ಪತ್ತೆ ಮಾಡಿದ್ದಾರೆ. ಗುಹೆಯ ಹೊರಗೆ ಬೈಸಿಕಲ್‌, ಫುಟ್‌ಬಾಲ್‌ ಬೂಟುಗಳು ಪತ್ತೆಯಾಗಿವೆ.

**

10 ದಿನಗಳ ಹಿಂದೆ:11ರಿಂದ 16 ವರ್ಷ ವಯೋಮಾನದ ಫುಟ್‌ಬಾಲ್‌ ಆಟಗಾರರು ತರಬೇತುದಾರರೊಂದಿಗೆ ಪ್ರಸಿದ್ಧ ಪ್ರವಾಸಿ ತಾಣವಾದ
ಉತ್ತರ ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹೆಯೊಳಗೆ ಜೂನ್‌ 23ರಂದು ಪ್ರವೇಶಿಸಿದ್ದರು. ಅದೇ ಸಮಯದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಪ್ರವೇಶದ್ವಾರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು.

ಹಲವು ಕಿಲೋ ಮೀಟರ್‌ ಉದ್ದದ ಪ್ರವಾಹ ‍ಪೀಡಿತ ಗುಹೆಯಲ್ಲಿ ಇಡೀ ತಂಡ ನಾಪತ್ತೆಯಾಗಿತ್ತು.

**

ಗುಹೆಯಲ್ಲಿ ಸಿಲುಕಿಕೊಂಡವರಿಗೆ ಕನಿಷ್ಠ ನಾಲ್ಕು ತಿಂಗಳಿಗಾಗುವಷ್ಟು ಆಹಾರವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದ್ದೇವೆ.

-ಆನಂದ್ ಸುರವಾನ್‌,ನೌಕಾಪಡೆಯ ಕ್ಯಾಪ್ಟನ್‌

**

ಮಳೆ ಅಡ್ಡಿ

ಒಂದು ವೇಳೆ ಗುಹೆ ಒಳಗೆ ಹೋಗಲು ಸಾಧ್ಯವಾಗದಿದ್ದರೆ ನೀರು ಕಡಿಮೆಯಾಗುವವರೆಗೆ ಕಾಯುವುದು ಅಥವಾ ಹೊರಗಿನಿಂದ ಕೊಳವೆಬಾವಿ ರೀತಿಯಲ್ಲಿ ಕೊರೆದು ತಂಡವನ್ನು ರಕ್ಷಿಸುವ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಫುಟ್‌ಬಾಲ್‌ ತಂಡದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ, ಸಮಯ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT