ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವದಲ್ಲಿ ಮಾನವೀಯ ಮೌಲ್ಯ ಮೇಳೈಸಲಿ

ರಾಷ್ಟ್ರೀಯ ಶಿಕ್ಷಕರ ಸಮ್ಮೇಳನದಲ್ಲಿ ರಾಮಕೃಷ್ಣ ವಿವೇಕಾನಂದ ವಿಶ್ವವಿದ್ಯಾನಿಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಅಭಿಮತ
Last Updated 28 ಮೇ 2018, 10:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವ್ಯಕ್ತಿಗಳಲ್ಲಿ ಆರೋಗ್ಯಕರ ಅರಿವನ್ನು ಮೂಡಿಸಿದಾಗ ಸಮಾಜದಲ್ಲಿ ಮೌಲ್ಯಗಳು ಒಡಮೂಡುತ್ತವೆ ಎಂದು ಕೊಲ್ಕತ್ತಾದ ರಾಮಕೃಷ್ಣ ವಿವೇಕಾನಂದ ವಿಶ್ವವಿದ್ಯಾನಿಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಿರುವ 2ನೇ ರಾಷ್ಟ್ರೀಯ ಶಿಕ್ಷಕರ ಸಮ್ಮೇಳನದಲ್ಲಿ ಅವರು ಭಾನುವಾರ ‘ಮೌಲ್ಯ ಶಿಕ್ಷಣದ ಒಳನೋಟ’ಗಳು ಎಂಬ ವಿಚಾರದ ಮೇಲೆ ಉಪನ್ಯಾಸ ಮಾಡಿದರು.

‘ಮೌಲ್ಯ ಎಂಬುದು ವಾಸ್ತವದ ಅರಿವಾಗಬೇಕು. ವ್ಯಕ್ತಿಗೆ ಉತ್ತಮ ಸಂಸ್ಕಾರ ದೊರೆತಾಗ ಅವನಲ್ಲಿ ಮೌಲ್ಯಗಳು ಸಂಚಯವಾಗುತ್ತವೆ. ಅಂತಹ ವ್ಯಕ್ತಿಗಳಿಗೆ ಮಾತ್ರ ಸಮಾಜ ತಲೆ ಬಾಗುತ್ತದೆ. ಜತೆಗೆ ಅಂತಹವರು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಭಾರತೀಯ ಸಂಸ್ಕೃತಿ ಮೌಲ್ಯಗಳ ಗಣಿ’- ಎಂಬ ವಿಷಯ ಕುರಿತು ಮಾತನಾಡಿದ ಶಿಕ್ಷಣ ತಜ್ಞ ಸತ್ಯೇಶ್ ಎನ್ ಬೆಳ್ಳೂರ್, ‘ದೇಶದಲ್ಲಿ ಅನಾದಿ ಕಾಲದಿಂದ ಬೆಳೆದು ಬಂದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಮೆಕಾಲೆಯ ದುರ್ಬೋಧನೆಯಿಂದ ಭಾರತೀಯ ಶಿಕ್ಷಣ ಪದ್ಧತಿ ಹಳಿತಪ್ಪಿತು. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಇವತ್ತು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸ್ವಾವಲಂಬನೆಗಿಂತ ಪರಾವಲಂಬನೆಯ ಗಿಳಿ ಪಾಠ ಮಹತ್ವವನ್ನು ಪಡೆದುಕೊಂಡಿದೆ. ಇದು ಬದಲಾಗಬೇಕು. ಕೃತಕ ಅಳವಡಿಕೆಯ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡದೇ ವಾಸ್ತವ ಶಿಕ್ಷಣಕ್ಕೆ ಮಾನ್ಯತೆ ನೀಡಿದರೆ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ನೆಮ್ಮದಿಯ ಬಾಳ್ವೆಗೆ ಸುಗಮದಾರಿಯನ್ನು ಕಲ್ಪಿಸಿಕೊಡ ಬಹುದು’ ಎಂದು ಪ್ರತಿಪಾದಿಸಿದರು.

ಕಳೆದ ಮೂರು ದಿನಗಳಿಂದ ನಡೆದಿದ್ದ ಸಮಾವೇಶಕ್ಕೆ ಭಾನುವಾರ ತೆರೆ ಬಿದ್ದಿತು. ಸತ್ಯಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹ ಮೂರ್ತಿ, ಸತ್ಯಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟ್‌ನ ಟ್ರಸ್ಟಿಗಳಾದ ಸಂಜೀವ ಶೆಟ್ಟಿ, ಜಿ ಎಮ್ ಅನಂತಮೂರ್ತಿ, ಮಹೇಂದ್ರ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT