ಪರಿಭ್ರಮಣದರ್ಶಕ ವಿಫಲ: ಹಬಲ್‌ಗೆ ತೊಂದರೆ

7

ಪರಿಭ್ರಮಣದರ್ಶಕ ವಿಫಲ: ಹಬಲ್‌ಗೆ ತೊಂದರೆ

Published:
Updated:

‌ವಾಷಿಂಗ್ಟನ್: ಬಾಹ್ಯಾಕಾಶದ ಕಕ್ಷೆಯಲ್ಲಿ 1990ರಿಂದ ಕಾರ್ಯಾಚರಿಸುತ್ತಿರುವ ಹಬಲ್‌ ಅಂತರಿಕ್ಷ ದೂರದರ್ಶಕವು ಅದರಲ್ಲಿನ ಪರಿಭ್ರಮಣದರ್ಶಕವೊಂದು (ಜೈರೊಸ್ಕೋಪ್‌) ವಿಫಲವಾದ ಕಾರಣಕ್ಕೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಹಬಲ್‌ನಲ್ಲಿ ಸಕ್ರಿಯ ಸ್ಥಿತಿಯಲ್ಲಿರಬೇಕಾದ ಜೈರೊಸ್ಕೋಪ್‌ಗಳಲ್ಲಿ ಒಂದು ಜೈರೊಸ್ಕೋಪ್‌ ವಿಫಲವಾಗಿದ್ದರಿಂದ ಹಬಲ್‌ ಅಂತರಿಕ್ಷ ದೂರದರ್ಶಕವು ಶುಕ್ರವಾರ ‘ಸುರಕ್ಷಿತ ಸ್ಥಿತಿ’ಗೆ (ಸೇಫ್‌ ಮೋಡ್‌) ಹೋಗಿದೆ ಎಂದು ನಾಸಾ ಹೇಳಿದೆ.

‘ಭೂಮಿ ಮೇಲಿನ ನಿಯಂತ್ರಣ ಕೇಂದ್ರದಿಂದಲೇ ಜೈರೊಸ್ಕೋಪ್‌ ಅನ್ನು ದುರಸ್ತಿಪಡಿಸಬಹುದಾಗಿದ್ದು, ಹಬಲ್‌ ಟೆಲಿಸ್ಕೋಪ್‌ ‘ಸೇಫ್‌ ಮೋಡ್‌’ನಿಂದ ಹೊರಬಂದು, ಮರಳಿ ಕಾರ್ಯಾಚರಣೆ ಆರಂಭಿಸಲಿದೆ’ ಎಂದು ನಾಸಾ ಸೋಮವಾರ ಪ್ರಕಟಣೆಯಲ್ಲಿ ಹೇಳಿದೆ.

ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ ಮತ್ತು ಬಾಹ್ಯಾಕಾಶ ಟೆಲಿಸ್ಕೋಪ್ ಸೈನ್ಸ್ ಇನ್ಸ್ಟಿಟ್ಯೂಟ್ ಸಿಬ್ಬಂದಿಯು ವಿಫಲವಾಗಿರುವ ಜೈರೊಸ್ಕೋಪ್‌ನ ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸುತ್ತಿದ್ದಾರೆ. ಹಬಲ್‌ನಲ್ಲಿರುವ ಉಪಕರಣಗಳು ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂಬರುವ ವರ್ಷಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯುತ್ತಮ ಫಲಿತಾಂಶಗಳು ಅದರಿಂದ ಸಿಗುವ ನಿರೀಕ್ಷೆ ಇದೆ ಎಂದು ನಾಸಾ ಹೇಳಿದೆ.

ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ನಿರ್ದೇಶಿಸಲು ಆರು ಜೈರೊಸ್ಕೋಪ್‌ಗಳನ್ನು ಅಳವಡಿಸಲಾಗಿದೆ. ಹಬಲ್‌ನಲ್ಲಿ ಸದ್ಯಕ್ಕೆ ಎರಡು ಜೈರೊಸ್ಕೋಪ್‌ಗಳು ಸ್ಥಗಿತಗೊಂಡಿವೆ. ಟೆಲಿಸ್ಕೋಪ್‌ನ ಸೂಕ್ತ ಕಾರ್ಯಾಚರಣೆಗೆ ಕನಿಷ್ಠ ಮೂರು ಜೈರೊಸ್ಕೋಪ್‌ಗಳು ಕಾರ್ಯನಿರ್ವಹಿಸಬೇಕು. ಒಂದು ಜೈರೊಸ್ಕೋಪ್‌ ಕಾರ್ಯನಿರ್ವಹಿಸಿದರೂ ಈ ದೂರದರ್ಶಕದಲ್ಲಿ ಪರಿಭ್ರಮಣ ವೀಕ್ಷಣೆ ಮುಂದುವರಿಸಬಹುದಾಗಿದೆ. 

ಹಬಲ್‌ ಯಶಸ್ಸಿನ ನಂತರ ದಿ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಅನ್ನು 2021ರ ಮಾರ್ಚ್‌ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ.

***

ಇದು ನಮ್ಮ ಪಾಲಿಗೆ ‘ಅತ್ಯಂತ ಒತ್ತಡದ ವಾರಾಂತ್ಯ’. ಜೈರೊಸ್ಕೋಪ್‌ ಸ್ಥಗಿತಗೊಂಡಿದ್ದು, ಸಮಸ್ಯೆ ಎದುರಿಸುತ್ತಿದ್ದೇವೆ. ಅದನ್ನು ಸರಿಪಡಿಸಲು ಪ್ರಯತ್ನಿಸುವುದು ನಮ್ಮ ಮೊದಲ ಗುರಿಯಾಗಿದೆ 

–ಡಾ.ರಾಚೆಲ್ ಓಸ್ಟನ್, ಹಬಲ್ ಮಿಷನ್‌, ಉಪ ಮುಖ್ಯಸ್ಥ

ಹಬಲ್‌ನ ಅಸಮರ್ಪಕ ಜೈರೊಸ್ಕೋಪ್‌ ದುರಸ್ತಿ ಸಾಧ್ಯವಾಗದಿದ್ದಲ್ಲಿ ಸುಸ್ಥಿತಿಯಲ್ಲಿರುವ ಕೇವಲ ಒಂದು ಸಾಧನವನ್ನೇ ಬಳಸಿಕೊಂಡು ವಿಜ್ಞಾನದ ಕಾರ್ಯಾಚರಣೆಗಳನ್ನು ಪುನರಾರಂಭಿಸುತ್ತೇವೆ 

–ನಾಸಾ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !