ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಧನೆ ನಿರ್ಲಕ್ಷಿಸಿದ ಪೇಟೆ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಸೋಮವಾರ ₹192 ರಿಂದ ಆರಂಭವಾಗಿ ₹244 ರವರೆಗೂ ಏರಿಕೆ ಕಂಡು ₹240 ರ ಸಮೀಪ ಕೊನೆಗೊಂಡಿದ್ದ ಪಿಸಿ ಜುವೆಲ್ಲರ್ಸ್ ಕಂಪನಿಯು ಈ ಹಿಂದೆ ಷೇರುಗಳ ಮರು ಖರೀದಿ (ಬೈಬ್ಯಾಕ್‌) ದಿನವನ್ನು ಬದಲಿಸಿದ್ದರಿಂದ  ಷೇರಿನ ಬೆಲೆಯಲ್ಲಿ ತೀವ್ರ ಏರಿಳಿತ ಕಂಡು ಬಂದಿತು.

ಷೇರಿನ ಬೆಲೆಯು ಮಂಗಳವಾರ ₹258 ರ ಸಮೀಪ ಆರಂಭವಾಗಿ ₹264 ನ್ನು ತಲುಪಿ ಅಲ್ಲಿಂದ ₹173 ರ ಸಮೀಪದವರೆಗೂ ಏಕಮುಖ ಕುಸಿತಕ್ಕೊಳಗಾಯಿತು. ಉತ್ತಮ ದರದಲ್ಲಿ ಮಾರಾಟ ಮಾಡಿದವರಿಗೆ ಅಂದೇ ಬೈಬ್ಯಾಕ್‌ಗೆ ಅವಕಾಶ ಕಲ್ಪಿಸಿದೆ ಈ ವಿಚಿತ್ರವಾದ ಪೇಟೆ.

ಬೈಬ್ಯಾಕ್ ಪ್ರಕಟಣೆಯಾದ ನಂತರದ ದಿನ ಅಂದರೆ ಶುಕ್ರವಾರ ₹247 ರವರೆಗೂ ಏರಿಕೆ ಕಂಡು ₹197 ರ ಸಮೀಪಕ್ಕೆ ಕುಸಿದು ₹200 ರ ಬಳಿ ವಾರಾಂತ್ಯ ಕಂಡಿತು.

ಒಂದೇ ವಾರದಲ್ಲಿ ಅಬ್ಬರದ ಏರಿಳಿತ ಪ್ರದರ್ಶಿಸಿದ ಈ ಕಂಪನಿ ಪ್ರತಿ ಷೇರಿಗೆ ₹350 ರವರೆಗೂ ಬೈಬ್ಯಾಕ್ ಮಾಡುವ ಯೋಜನೆ ಪ್ರಕಟಿಸಿದೆ. ಆದರೆ, ಈ ಬೈಬ್ಯಾಕ್ ಶೇ 3.07 ರಷ್ಟು ಮಾತ್ರ.  ಶೇ 42.37 ರಷ್ಟು ಭಾಗಿತ್ವ ಸಾರ್ವಜನಿಕರಲ್ಲಿದೆ. ಅಂದರೆ ಸಾರ್ವಜನಿಕರಲ್ಲಿರುವ 16.70 ಕೋಟಿ ಷೇರುಗಳಲ್ಲಿ 1.21 ಕೋಟಿ ಷೇರುಗಳನ್ನು ಬೈಬ್ಯಾಕ್ ಮಾಡುವ ಯೋಜನೆಯಾಗಿದೆ. ಇದು ಆಕರ್ಷಕವಾಗಿರದ ಕಾರಣ ಹೆಚ್ಚಿನ ಮಾರಾಟದ ಒತ್ತಡವನ್ನು ಎದುರಿಸಿತು.

ಉದ್ಯಮವೊಂದನ್ನು ಯಶಸ್ವಿಗೊಳಿಸಲು  ಮೊದಲು ಅದರ ಬ್ರ್ಯಾಂಡ್‌ ಜನಪ್ರಿಯಗೊಳಿಸಬೇಕು. ಒಂದು ಸಂಸ್ಥೆಯ ಬ್ರ್ಯಾಂಡ್ ಯಶಸ್ವಿಯಾಗಲು ರಿಟೇಲ್ ಗ್ರಾಹಕರ ಬೆಂಬಲ ಮುಖ್ಯವಾಗಿರುತ್ತದೆ.

ಆನ್‌ಲೈನ್ ವಹಿವಾಟು ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77 ರಷ್ಟು ಭಾಗಿತ್ವವನ್ನು ₹ 1.07 ಲಕ್ಷ ಕೋಟಿಗೆ ಅಮೆರಿಕದ ರಿಟೇಲ್ ಕಂಪನಿ ವಾಲ್‌ಮಾರ್ಟ್‌ಗೆ ಮಾರಾಟ ಮಾಡಿದ ಸುದ್ದಿಯು ಸ್ಥಳೀಯ ಇತರೆ ರಿಟೇಲ್ ಆಧಾರಿತ ಸಂಸ್ಥೆಗಳು ಚುರುಕಾದ ಚಟುವಟಿಕೆಯನ್ನು ಪ್ರದರ್ಶಿಸುವಂತೆ ಮಾಡಿತು.  ಕಂಪನಿಗಳಾದ ಅವೆನ್ಯೂ ಸೂಪರ್ ಮಾರ್ಕೆಟ್ಸ್, ಫ್ಯೂಚರ್ ರಿಟೇಲ್‌ನಂತಹ ಕಂಪನಿಗಳು ಚುರುಕಾದ ಏರಿಕೆ ಕಂಡು ನಂತರ ಸ್ವಲ್ಪ ಇಳಿಕೆ ಪಡೆದುಕೊಂಡವು. ಈ ತರಹದ ಬೆಳವಣಿಗೆಗಳು ತಾತ್ಕಾಲಿಕ ಪ್ರಭಾವ ಬೀರುತ್ತವಷ್ಟೆ.

ಸಾಮಾನ್ಯವಾಗಿ ಒಂದು ಕಂಪನಿ ಉತ್ತಮ ಫಲಿತಾಂಶ ಪ್ರಕಟಿಸಿದಾಗ ಆ ಷೇರಿನ ಬೆಲೆ ಏರಿಕೆ ಕಾಣುವುದು, ಕಳಪೆ ಫಲಿತಾಂಶ ಪ್ರಕಟಿಸಿದಾಗ ಷೇರಿನ ಬೆಲೆ ಕುಸಿಯುತ್ತದೆ.  ಆದರೆ, ಹಿಂದಿನ ವಾರ ಐಸಿಐಸಿಐ ಬ್ಯಾಂಕ್ ಪ್ರಕಟಿಸಿದ ಅಂಕಿ ಅಂಶಗಳು ಕಳಪೆಯಾಗಿದ್ದು, ಹಿಂದಿನ ಸಾಧನೆಗಿಂತ ಕೆಳಮಟ್ಟದಲ್ಲಿತ್ತು,  ಆದರೂ ಸಹ ಷೇರಿನ ಬೆಲೆ ₹314 ರವರೆಗೂ ಏರಿಕೆ ಕಂಡಿತು.  ಅದೇ ರೀತಿ ಹಿಂದಿನ ದಿನಗಳಲ್ಲಿ ಆ್ಯಕ್ಸಿಸ್‌ ಬ್ಯಾಂಕ್ ಸಾಧನೆಯ ಅಂಶಗಳು ಪ್ರಕಟವಾದಾಗ ಷೇರಿನ ಬೆಲೆ ₹ 480 ರವರೆಗೂ ಕುಸಿದು ನಂತರ ಅಂದೇ ₹ 540 ರವರೆಗೂ ಜಿಗಿತ ಕಂಡಿತು. ಇದು ಷೇರುಪೇಟೆಯ ವಿಸ್ಮಯಕಾರಿ ಅಂಶ.

ಇತ್ತೀಚಿನ ದಿನಗಳಲ್ಲಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ ಕಂಪನಿ ಷೇರು ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.  ₹405ರವರೆಗೂ ಕುಸಿದಿದ್ದ ಈ ಷೇರು ₹455 ರವರೆಗೂ ಚೇತರಿಕೆ ಕಂಡು ಮತ್ತೊಮ್ಮೆ ₹415 ರ ಸಮೀಪಕ್ಕೆ ಇಳಿದಿದೆ.  ಈ ತಿಂಗಳ 14 ರಂದು ಕಂಪನಿ ಆಡಳಿತ ಮಂಡಳಿಯು ಹಕ್ಕಿನ ಷೇರು ವಿತರಣೆ ಬಗ್ಗೆ ಪರಿಶೀಲಿಸಲಿದೆ ಎಂಬುದು ಸಹ ಷೇರಿನ ಬೆಲೆ ಇಳಿಕೆಗೆ ಪೂರಕ ಅಂಶವಾಗಿತ್ತು.

ಷೇರುಪೇಟೆಯ ವಿಶೇಷತೆಯು ಹೇಗಿದೆ ಎಂದರೆ ಮಂಗಳವಾರ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಷೇರುಗಳ ಗಜಗಾತ್ರದ ವಹಿವಾಟಿನ ಕಾರಣ ಷೇರಿನ ಬೆಲೆ ₹1,370 ರ ಸಮೀಪದಿಂದ ₹1,260 ರವರೆಗೂ ಕುಸಿಯಿತು.  ಆದರೆ, ಬುಧವಾರ ಇದೇ ಷೇರು ₹1,330 ರ ಗಡಿ ದಾಟಿತು.  ಅಂದರೆ ಉತ್ತಮ ಸಾಧನೆಯ ಕಂಪನಿಯ ಷೇರಿನ ಬೆಲೆ ಭಾರಿ ಕುಸಿತಕ್ಕೊಳಗಾದಾಗ ಅದು ಉತ್ತಮ ವ್ಯಾಲ್ಯೂ ಪಿಕ್ ಆಗಿ ಪರಿಣಮಿಸುವುದು.

ಕಂಪನಿಗಳು ಪ್ರಕಟಿಸಿದ ಸಾಧನೆಯ ಅಂಶಗಳು, ಲಾಭಾಂಶಗಳು ಉತ್ತಮವಾಗಿದ್ದರೂ ಸಹ ಪೇಟೆ ಅದನ್ನು ಗುರುತಿಸುತ್ತಿಲ್ಲ. ಕಾರಣ ಕರ್ನಾಟಕ ರಾಜ್ಯದ ಚುನಾವಣೆ. ಎಲ್ಲರೂ ಕುತೂಹಲದಿಂದ ಫಲಿತಾಂಶವನ್ನು  ನಿರೀಕ್ಷಿಸುತ್ತಿದ್ದಾರೆ.  ಷೇರುಪೇಟೆ ಮಾತ್ರ ಗೊಂದಲದಲ್ಲಿದ್ದುದರ ಕಾರಣ ಉತ್ತಮ ಕಂಪನಿಗಳು ಸಹ ಬೆಂಬಲ ಪಡೆಯಲಿಲ್ಲ. ‌

ಎಸಿಸಿ ಲಿಮಿಟೆಡ್ ಕಂಪನಿ ಪ್ರತಿ ಷೇರಿಗೆ ₹15 ರ ಲಾಭಾಂಶ ನೀಡಲು ಈ ತಿಂಗಳ 16ರ ರವರೆಗೂ ಸಮಯವಿದ್ದರೂ ಸಹ ಶುಕ್ರವಾರ 1,465 ರ ಸಮೀಪದ ವಾರ್ಷಿಕ ಕನಿಷ್ಠಕ್ಕೆ ಕುಸಿದು ₹1,471 ರಲ್ಲಿ ವಾರಾಂತ್ಯ ಕಂಡಿತು.

ಕಂಪನಿಗಳಾದ ಕ್ಯಾನ್‌ಫಿನ್ ಹೋಮ್ಸ್, ಗ್ಲೇನ್ ಮಾರ್ಕ್ ಫಾರ್ಮಾ, ಮಹಾನಗರ ಗ್ಯಾಸ್,  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಸ್ಟ್ರೈಡ್ಸ್ ಶಾಸೂನ್‌ಗಳಲ್ಲದೆ ಹಿಂದುಸ್ಥಾನ್ ಏರೊನಾಟಿಕ್ಸ್ ಲಿ, ಮುಂತಾದವುಗಳು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿದವು.

ಆದರೆ ರೂಪಾಯಿಯ ಬೆಲೆ ಕುಸಿಯುತ್ತಿದ್ದು, ಕಚ್ಚಾ ತೈಲಬೆಲೆ ಏರಿಕೆ ಕಾಣುತ್ತಿದ್ದರೂ ಸಹ ತೈಲ ಮಾರಾಟ ಕಂಪನಿಗಳಾದ  ಬಿಪಿಸಿಎಲ್ ₹400 ರವರೆಗೂ, ಎಚ್‌ಪಿಸಿಎಲ್‌  ₹321 ರವರೆಗೂ,  ಇಂಡಿಯನ್ ಆಯಿಲ್ ಕಾರ್ಪೊರೇಷನ್  ತಿಂಗಳ ಗರಿಷ್ಠ ₹172 ರವರೆಗೂ ಏರಿಕೆ ಕಂಡವು.  ಇದು ವ್ಯಾಲ್ಯೂ ಪಿಕ್ ಚಟುವಟಿಕೆಯಾಗಿದೆ.

ಬಹಳಷ್ಟು ಕುಸಿತ ಕಂಡಿರುವ ಅಗ್ರಮಾನ್ಯ ಕಂಪನಿಗಳನ್ನು  ದೀರ್ಘಕಾಲೀನ ಹೂಡಿಕೆಯ ದೃಷ್ಟಿಯಿಂದ  ಆಯ್ಕೆ ಮಾಡಿಕೊಂಡರೆ ಫಲಿತಾಂಶ ಉತ್ತಮವಾಗಿರುತ್ತದೆ.

ಮುಖಬೆಲೆ ಸೀಳಿಕೆ: ಫಿಲಾಟೆಕ್ಸ್ ಇಂಡಿಯಾ ಕಂಪನಿ ಷೇರಿನ ಬೆಲೆ ₹10 ರಿಂದ ₹2.00 ಕ್ಕೆ ಸೀಳಲಿದೆ ಅವಂತಿ ಫೀಡ್ಸ್ ಕಂಪನಿ ಷೇರಿನ ಮುಖಬೆಲೆ ₹2 ರಿಂದ ₹1 ಕ್ಕೆ ಸೀಳಲಿದೆ

ಲಾಭಾಂಶ: ₹1 ರ ಮುಖಬೆಲೆಯ ಷೇರು ಗಳು- ಟಾಟಾ ಕಾಫಿ ₹1.50, ಟ್ಯೂಬ್ ಇನ್‌ವೆಸ್ಟ್‌ಮೆಂಟ್  ₹0.50, ಎಕ್ಸೈಡ್ ₹0.80,  ಕಜಾರಿಯ ಸಿರಾಮಿಕ್ಸ್: ₹3.

ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರು ಸಹ ಲಾಭಾಂಶ ಘೋಷಣೆಯಲ್ಲಿ ಹಿಂಜರಿಯುತ್ತಿವೆ.

ಉಜ್ಜೀವನ್ ಫೈನಾನ್ಸ್ ಆಕರ್ಷಕ ಅಂಕಿ ಅಂಶ ಪ್ರಕಟಿಸಿದೆ ಎಂದಾದರೂ ಪ್ರಕಟಿಸಿದ ಲಾಭಾಂಶ ಮಾತ್ರ ಪ್ರತಿ ಷೇರಿಗೆ ₹0.50,  ಖಾದಿಮ್ ಇಂಡಿಯಾ ಪ್ರತಿ ಷೇರಿಗೆ ₹1 ರ ಲಾಭಾಂಶ ಪ್ರಕಟಿಸಿದೆ.

(ಮೊ:9886313380, ಸಂಜೆ 4.30 ರನಂತರ)

**

ಈ ವಾರದ ಮುಖ್ಯ ಕೇಂದ್ರ ಬಿಂದು ಕರ್ನಾಟಕ ರಾಜ್ಯದ ವಿಧಾನ ಸಭಾ ಚುನಾವಣಾ ಫಲಿತಾಂಶ.  ಮಂಗಳವಾರ ಪ್ರಕಟವಾಗುವ ಫಲಿತಾಂಶವು ತೀವ್ರತರವಾದ ಏರಿಳಿತ ಸೃಷ್ಟಿಸಲಿದೆ. ಇತರೆ ಅಂಶಗಳಾದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮಾರ್ಚ್‌ನಲ್ಲಿ ಶೇ4.4 ಕ್ಕೆ ಇಳಿದಿರುವುದು,  2019 ರ ವೇಳೆಗೆ ಭಾರತದ ಬೆಳವಣಿಗೆಯು ಶೇ7.3 ರಷ್ಟಿರುವುದು ಎಂಬ ರೇಟಿಂಗ್ ಸಂಸ್ಥೆ ಫಿಚ್ ತಿಳಿಸಿರುವುದಾಗಲಿ, ಎಲ್ಲವು ತಾತ್ಕಾಲಿಕ ಪ್ರಭಾವಿಯಾಗಿವೆ.

ಈಗ ಪ್ರಕಟವಾಗುತ್ತಿರುವ ಫಲಿತಾಂಶಗಳು ವಿಶೇಷವಾಗಿ ಬ್ಯಾಂಕಿಂಗ್ ವಲಯದ ಸಾಧನೆ ಪ್ರೋತ್ಸಾಹದಾಯಕವಾಗಿ ಇಲ್ಲದಿರುವುದು ಸಹ ಪೇಟೆಯನ್ನು ಅಸ್ಥಿರತೆಯತ್ತ ಸಾಗುವಂತೆ ಮಾಡಿವೆ. ಈಗಿನ ಪರಿಸ್ಥಿತಿಯಲ್ಲಿ ದೀರ್ಘಕಾಲೀನ ಹೂಡಿಕೆ ಚಿಂತನೆ ಸರಿಯಲ್ಲವೆನಿಸುತ್ತಿದ್ದು, ಏರಿಳಿತಗಳ ಉಯ್ಯಾಲೆಯ ಆಟದಲ್ಲಿ ದೊರೆಯಬಹುದಾದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಕೌಶಲ ಅಳವಡಿಸಿಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT