ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೋಂಕಿಗೆ ಅಮೆರಿಕದಲ್ಲಿ ಮೊದಲ ಬಲಿ: ವಿದೇಶ ಪ್ರಯಾಣ ನಿರ್ಬಂಧ

Last Updated 1 ಮಾರ್ಚ್ 2020, 19:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ಬೀಜಿಂಗ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಕೋವಿಡ್‌–19 ಸೋಂಕು ಮೊದಲ ಬಲಿ ಪಡೆದಿದ್ದು, ಈ ಘಟನೆ ಬೆನ್ನಲ್ಲೇಇರಾನ್‌ನಿಂದ ಅಮೆರಿಕಕ್ಕೆ ಆಗಮಿಸುವುದನ್ನು ನಿರ್ಬಂಧಿಸಲಾಗಿದೆ.

ಜೊತೆಗೆದಕ್ಷಿಣ ಕೊರಿಯಾ ಹಾಗೂ ಇಟಲಿಯ ಕೆಲ ಪ್ರದೇಶಗಳಿಗೆ ಪ್ರಯಾಣಿಸದಂತೆ ತನ್ನ ಜನರಿಗೆ ಸಲಹೆ ನೀಡಿದೆ.

‘ದುರದೃಷ್ವವಶಾತ್‌, ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿನ ಪ್ರಕರಣಗಳು ಮತ್ತಷ್ಟು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೋಂಕು ಎದುರಿಸಲು ಅಮೆರಿಕ ಸಜ್ಜಾಗಿದೆ.ಜನರು ಗಾಬರಿಗೊಳ್ಳಬೇಡಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2,870 ಜನರು ಬಲಿ: ‘ಕೋವಿಡ್‌ ಸೋಂಕಿಗೆ ಚೀನಾದಲ್ಲಿ ಶನಿವಾರ 35 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 2,870ಕ್ಕೆ ಏರಿಕೆಯಾಗಿದೆ. 79,824 ಜನರಲ್ಲಿ ಸೋಂಕು ದೃಢಪಟ್ಟಿದೆ.

ಹ್ಯುಬೆ ಪ್ರಾಂತ್ಯದ ಹೊರಗೆ ಸೋಂಕು ವ್ಯಾಪಿಸುತ್ತಿರುವುದು ಇಳಿಕೆಯಾಗುತ್ತಿದೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ. ಶನಿವಾರ ಮೃತಪಟ್ಟವರ ಪೈಕಿ 34 ಜನ ಹ್ಯುಬೆ ಪ್ರಾಂತ್ಯದವರಾಗಿದ್ದು, ಒಬ್ಬರು ಹೆನನ್‌ ಪ್ರಾಂತ್ಯದವರಾಗಿದ್ದಾರೆ.

ಕೇರಳ: ನ್ಯುಮೋನಿಯಾದಿಂದ ಸಾವು
ಕೊಚ್ಚಿ: ‘ಇಲ್ಲಿನ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕು ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ವ್ಯಕ್ತಿಯೊಬ್ಬರು ತೀವ್ರ ಜ್ವರದಿಂದ ಮೃತಪಟ್ಟಿದ್ದಾರೆ ವಿನಃ ಅವರಿಗೆ ಕೋವಿಡ್‌ ಸೋಂಕು ಇರಲಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

‘ಐದು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ರೋಗಿಗೆ ಸಕ್ಕರೆ ಕಾಯಿಲೆಯೂ ಇತ್ತು. ಬಹುಅಂಗಾಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ’ ಎಂದು ವೈದ್ಯರು ಮಾಹಿತಿ ನೀಡಿದರು. ರೋಗಿಯ ರಕ್ತದ ಮಾದರಿಯನ್ನು ವಿಸ್ತೃತವಾದ ಪರೀಕ್ಷೆಗೆ ಆಳಪುಳದಲ್ಲಿರುವ ಎನ್‌ಐವಿ ಪ್ರಯೋಗಾಲಯಕ್ಕೆ ಇಲಾಖೆ ಅಧಿಕಾರಿಗಳು ಕಳುಹಿಸಿದ್ದು, ವರದಿ ಇನ್ನಷ್ಟೇ ಕೈಸೇರಬೇಕಾಗಿದೆ.

‘ಮಲೇಷ್ಯಾದಿಂದ ಶುಕ್ರವಾರವಷ್ಟೇ ಈ ವ್ಯಕ್ತಿ ಕೇರಳಕ್ಕೆ ಬಂದಿದ್ದರು. ಅವರಿಗೆ ತೀವ್ರವಾದ ಜ್ವರ ಹಾಗೂ ಉಸಿರಾಟದ ಸಮಸ್ಯೆ ಇತ್ತು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಇವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದು ಕಂಡುಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ವೈದ್ಯರು ತಿಳಿಸಿದರು.

ಪ್ರಾಣಿಗಳಿಂದ ಸೋಂಕು ಮನುಷ್ಯರಿಗೆ
ಕೋವಿಡ್‌19 ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಯುಎಚ್‌ಒ) ಹಾಗೂ ಎನ್‌ಎಚ್‌ಸಿ ಜಂಟಿಯಾಗಿ ಅಧಿಕೃತ ವರದಿ ಬಿಡುಗಡೆಗೊಳಿಸಿದ್ದು, ಇದನ್ನು ‘ಜೂನಾಟಿಕ್‌’ ವೈರಾಣು ಎಂದು ಗುರುತಿಸಲಾಗಿದೆ. ಈ ಸೋಂಕು ಬ್ಯಾಕ್ಟೀರಿಯಾ, ವೈರಾಣು ಅಥವಾ ಪರಾವಲಂಬಿ ಜೀವಿಗಳ ಮುಖಾಂತರ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಉಲ್ಲೇಖಿಸಲಾಗಿದೆ.‘ಈ ಸೋಂಕು ಕುಟುಂಬದೊಳಗೆ ಮನುಷ್ಯರಿಂದ ಮನುಷ್ಯರಿಗೆ ಹೆಚ್ಚಾಗಿ ಹರಡುತ್ತಿದೆ. ಸೋಂಕು ತಗುಲಿದ 5–6 ದಿನಗಳಲ್ಲಿ ರೋಗದ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT