ಶುಕ್ರವಾರ, ಆಗಸ್ಟ್ 6, 2021
22 °C

ಹೆಚ್ಚಿನ ಪರೀಕ್ಷೆ ನಡೆಸಿದರೆ, ಭಾರತ, ಚೀನಾದಲ್ಲಿ ನಮಗಿಂತ ಹೆಚ್ಚು ಪ್ರಕರಣ: ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತ ಮತ್ತು ಚೀನಾದಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಿದರೆ, ‌ಅಮೆರಿಕಕ್ಕಿಂತ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಅಲ್ಲಿ ಕಂಡುಬರುತ್ತವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಭಿನ್ನ

‌ಮೈನ್‌ ನಗರದಲ್ಲಿರುವ ‘ಪ್ಯೂರಿಟನ್ ಮೆಡಿಕಲ್ ಪ್ರಾಡಕ್ಸ್‌’ನಲ್ಲಿ ಸೋಂಕು ಪತ್ತೆ ಪರೀಕ್ಷೆಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, "ನಾವು 20 ದಶಲಕ್ಷಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದ್ದೇವೆ. ನೆನಪಿಡಿ, ನೀವು ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ನಾನು ನಮ್ಮ ಜನರಿಗೆ ಹೇಳುತ್ತಲೇ ಇರುತ್ತೇನೆ. ನಾವು ಹೆಚ್ಚಿನ ಪರೀಕ್ಷೆಯನ್ನು ಮಾಡುತ್ತಿರುವ ಕಾರಣ ಹೆಚ್ಚಿನ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಅದೇ, ಭಾರತ ಅಥವಾ ಚೀನಾದಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದರೆ, ಖಂಡಿತವಾಗಿಯೂ ಅಲ್ಲಿ ನಮಗಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆಯಾಗುತ್ತವೆ,’ ಎಂದು ಅವರು ತಿಳಿಸಿದ್ದಾರೆ. 

ಭಾರತ ಇದುವರೆಗೆ 4 ದಶಲಕ್ಷಕ್ಕೂ ಹೆಚ್ಚು ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ 20 ದಶಲಕ್ಷ ಪರೀಕ್ಷೆಗಳನ್ನು ನಡೆಸಿದೆ. 

‘ಅಮೆರಿಕವು ಈ ವರೆಗೆ 20 ದಶಲಕ್ಷ ಪರೀಕ್ಷೆಗಳನ್ನು ನಡೆಸಿದೆ. ಅಮೆರಿಕಕ್ಕೆ ಹೋಲಿಸಿದರೆ, ಜರ್ಮನಿ ನಾಲ್ಕು ದಶಲಕ್ಷ ಪರೀಕ್ಷೆಗಳನ್ನು ನಡೆಸಿದೆ. ಕೊರೊನಾ ವೈರಸ್‌ ವಿಚಾರವಾಗಿ ಹೆಚ್ಚು ಚರ್ಚೆಗೆ ಒಳಗಾಗಿರುವ ದಕ್ಷಿಣ ಕೊರಿಯಾದದಲ್ಲಿ  ಮೂರು ದಶಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ,’ ಎಂದು ಟ್ರಂಪ್‌ ತಿಳಿಸಿದರು. 

ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್‌ 19 ಟ್ರಾಕರ್‌ ಪ್ರಕಾರ ಅಮೆರಿಕ 18,97,838 ಸೋಂಕಿತರಿದ್ದರೆ, ಭಾರತದಲ್ಲಿ 2,36,954 ಸೋಂಕು ಪ್ರಕರಣಗಳಿವೆ. ಚೀನಾದಲ್ಲಿ 84,177 ಪ್ರಕರಣಗಳಿವೆ ಎಂದು ಹೇಳಲಾಗಿದೆ.

ಡಬ್ಲ್ಯುಎಚ್‌ಒ ಎಚ್ಚರಿಕೆ: ಭಾರತ ದಲ್ಲಿ ಈವರೆಗೆ ಕೊರೊನಾ ವೈರಸ್‌ ಸೋಂಕಿನ ಸ್ಫೋಟ ಸಂಭವಿಸದೇ ಇರಬಹುದು. ಆದರೆ, ಅದು ಸಂಭವಿಸುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್‌ ರ‍್ಯಾನ್‌ ಶುಕ್ರವಾರ ಎಚ್ಚರಿಸಿದ್ದಾರೆ.  ಭಾರತದಲ್ಲಿ ಲಾಕ್‌ಡೌನ್‌ ಹಂತ ಹಂತವಾಗಿ ತೆರವುಗೊಳ್ಳುತ್ತಿದೆ. ಈ ಮೂರು ವಾರಗಳ ಕಾಲ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಭಾರತದ ನಗರ ಹಾಗೂ ಹಳ್ಳಿಗಳಲ್ಲಿ ಈ ಸೋಂಕಿನ ಪ್ರಸರಣ ವಿಭಿನ್ನವಾಗಿದೆ ಎಂದಿದ್ದಾರೆ. 

‘ಸೋಂಕು ಹೆಚ್ಚಳವಾಗುವ ದರ ಹಾಗೂ ಎಷ್ಟು ದಿನಗಳಲ್ಲಿ ಈ ಪ್ರಮಾಣ ದ್ವಿಗುಣವಾಗುತ್ತದೆ ಎಂಬುದರ ಮೇಲೆ ಭಾರತ ನಿಗಾ ಇಡುವುದು ಅವಶ್ಯ‘ ಎಂದು ಡಬ್ಲ್ಯೂಎಚ್‌ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ.

ತಪಾಸಣೆಯಲ್ಲಿ ಭಾರತ ಹಿಂದೆ

ಪ್ರತಿ 10 ಲಕ್ಷ ಜನರಲ್ಲಿ ತಪಾಸಣೆಗೆ ಒಳಪಡಿಸುತ್ತಿರುವ ಪ್ರಮಾಣದಲ್ಲೂ ಭಾರತ ಹಿಂದೆ ಉಳಿದಿದೆ. 2 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ದೇಶಗಳಿಗೆ ಹೋಲಿಸಿದರೆ ಭಾರತವು ನಡೆಸುತ್ತಿರುವ ತಪಾಸಣೆಗಳ ಪ್ರಮಾಣ ಅತ್ಯಂತ ಕಡಿಮೆ ಇದೆ

86,921 ಸ್ಪೇನ್

64,664 ಇಟಲಿ

63,158 ಬ್ರಿಟನ್

2,876 ಭಾರತ

(ಪ್ರತಿ ಹತ್ತು ಲಕ್ಷಕ್ಕೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು