ಮಂಗಳವಾರ, ನವೆಂಬರ್ 19, 2019
23 °C

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ 20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್‌

Published:
Updated:

ನ್ಯೂಯಾರ್ಕ್‌: ರಾಜಕೀಯ ಮತ್ತು ವ್ಯವಹಾರಿಕ ಲಾಭಕ್ಕೊಸ್ಕರ ತಮ್ಮ ಚಾರಿಟೇಬಲ್‌ ಟ್ರಸ್ಟ್‌ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ 20 ಲಕ್ಷ ಡಾಲರ್‌ ಮೊತ್ತದ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯೂಯಾರ್ಕ್‌ ಸುಪ್ರೀಂ ಕೋರ್ಟ್‌ ನ್ಯಾಯಧೀಶ ಸಾಲಿಯನ್ ಸ್ಕಾರ್ಪುಲ್ಲಾ ಅವರು, ’ಲಾಭರಹಿತ ಸಂಸ್ಥೆಗಳನ್ನು(ಎನ್‌ಜಿಒ) ಯಾವುದೇ ದುರುದ್ದೇಶಕ್ಕಾಗಲೀ, ವೈಯಕ್ತಿಕ ಲಾಭಕ್ಕಾಗಲೀ ಬಳಸಿಕೊಳ್ಳುವಂತಿಲ್ಲ. ಆದರೆ, ತಮ್ಮದೇ ಚಾರಿಟೇಬಲ್‌ ಸಂಸ್ಥೆಯನ್ನು ರಾಜಕೀಯ ಮತ್ತು ವ್ಯವಹಾರಿಕ ಲಾಭಕ್ಕಾಗಿ ಟ್ರಂಪ್‌ ಅವರು ಉಪಯೋಗಿಸಿಕೊಂಡಿದ್ದಾರೆ. ಆ ಮೂಲಕ ನಾಗರಿಕ ಕಾನೂನನ್ನು ಉಲ್ಲಂಘಿಸಿದ್ದು, ಅವರಿಗೆ 2 ಮಿಲಿಯನ್‌ ಡಾಲರ್‌ ದಂಡವಿಧಿಸಲಾಗಿದೆ,’ ಎಂದು ಸ್ಪಷ್ಟಪಡಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದವರೂ ಆದ ನ್ಯೂಯಾರ್ಕ್‌ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಲೆತಿಶಿಯಾ ಜೆಮ್ಸ್‌ ಅವರು ಈ ಸಂಬಂಧ ನ್ಯೂಯಾರ್ಕ್‌ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಕಳೆದ ವರ್ಷ ಜೂನ್‌ ತಿಂಗಳು ಹೂಡಿದ ದಾವೆಯಲ್ಲಿ ಟ್ರಂಪ್‌ ಅವರ ‘ನಿರಂತರ ಕಾನೂನುಬಾಹಿರ ನಡವಳಿಕೆ‘ ಬಗ್ಗೆ ಆರೋಪಿಸಿದ್ದರು. 

ನ್ಯೂಯಾರ್ಕ್‌ ಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜೇಮ್ಸ್‌ ಅವರು, ’ಚಾರಿಟೇಬಲ್‌ ಆಸ್ತಿ ರಕ್ಷಣೆ ಮತ್ತು ಚಾರಿಟಿಯನ್ನು ದುರುದ್ದೇಶಕ್ಕೆ ಬಳಸಿಕೊಳ್ಳವವರ ವಿರುದ್ಧ ತಮಗೆ ಸಿಕ್ಕ ಬಹುದೊಡ್ಡ ಜಯ,’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ನ್ಯೂಯಾರ್ಕ್‌ ನ್ಯಾಯಾಲಯವು ಒಂದೇ ವಾರದಲ್ಲಿ ಮೂರು ತೀರ್ಪುಗಳನ್ನು ನೀಡಿರುವುದು ಇಲ್ಲಿ ಗಮನಾರ್ಹ ಅಂಶ.

ಪ್ರತಿಕ್ರಿಯಿಸಿ (+)