ಸೋಮವಾರ, ನವೆಂಬರ್ 18, 2019
25 °C
ಜನಾಂಗೀಯ, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಅಮೆರಿಕ ಆರ್ಥಿಕ ನೆರವು

ಟರ್ಕಿ ದಾಳಿ: ಸಿರಿಯಾ ಗಡಿಯಲ್ಲಿ ಆತಂಕ

Published:
Updated:
Prajavani

ಜಿನೀವಾ: ಸಿರಿಯಾದ ಉತ್ತರ ಭಾಗದಲ್ಲಿ, ಕುರ್ದಿಶ್‌ ಸಮೂಹವನ್ನು ಗುರಿಯಾಗಿಸಿ ಟರ್ಕಿ ನಡೆಸಿರುವ ದಾಳಿಯಿಂದಾಗಿ ಸುಮಾರು 1.30 ಲಕ್ಷ ಜನ ಮನೆಗಳನ್ನು ಬಿಟ್ಟು ತೆರಳಿದ್ದಾರೆ. ಈ ಸಂಖ್ಯೆ ಮೂರು ಪಟ್ಟು ಹೆಚ್ಚಬಹುದು ಎಂದು ವಿಶ್ವಸಂಸ್ಥೆ ಭಾನುವಾರ ಹೇಳಿದೆ.

ಬಾಧಿತ ಪ್ರದೇಶಗಳಿಂದ 4 ಲಕ್ಷ ಜನರು ಹೋಗುವ ಅಂದಾಜಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಘಟಕ ‘ಒಚಾ’ ಅಭಿಪ್ರಾಯಪಟ್ಟಿದೆ. ‘ಈ ಜನರಿಗೆ ರಕ್ಷಣೆಯ ನೆರವು ಬೇಕಿದೆ’ ಎಂದೂ ಸಂಸ್ಥೆ ಪ್ರತಿಪಾದಿಸಿದೆ.

‘ಕಳೆದ ಬುಧವಾರ ಟರ್ಕಿ ಕಾರ್ಯಾಚರಣೆ ಆರಂಭಿಸಿದ ಹಾಗೂ ಗಡಿಯಿಂದ ಹಿಂದಿರುಗಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತನ್ನ ಸೇನೆಗೆ ನಿರ್ದೇಶಿಸಿದ ನಂತರ ಸುಮಾರು 1 ಲಕ್ಷ ಜನರಿಗೆ ಮನೆಗಳನ್ನು ಬಿಟ್ಟು ಹೋಗುವಂತೆ ಬಲವಂತಪಡಿಸಲಾಗಿದೆ’ ಎಂದೂ ವಿಶ್ವಸಂಸ್ಥೆ ತಿಳಿಸಿದೆ.

‘ಟೆಲ್‌ ಅಬಿಯಾ, ರಾಸ್‌ ಅಲ್‌ ಐನ್‌ ಪಟ್ಟಣ ಆಸುಪಾಸಿನ ಗ್ರಾಮೀಣ ಪ್ರದೇಶದಿಂದ ಇನ್ನಷ್ಟು ಜನ  ಭೀತಿಯಿಂದ ಹೀಗೆ ದೂರ ಹೋಗುವ ಸಂಭವವಿದೆ. ಈಗಲೇ ನಿರ್ದಿಷ್ಟ ಸಂಖ್ಯೆ ಅಂದಾಜಿಸಲಾಗದು. ಕೆಲವರು ಬಂಧುಗಳ ಮನೆಗೆ ಹೋಗಿದ್ದರೆ, ಹೆಚ್ಚಿನವರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಹೇಳಿದೆ. 

‘ನಿರಾಶ್ರಿತರ ಶಿಬಿರದಿಂದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಕುಟುಂಬಗಳ  ಮಹಿಳೆಯರು, ಮಕ್ಕಳು ಸೇರಿ ನೂರಕ್ಕೂ ಅಧಿಕ ಜನ ಅಲ್ಲಿಂದ ನಿರ್ಗಮಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಐನ್‌ ಇಸ್ಸಾದಲ್ಲಿ ಇರುವ ಶಿಬಿರದಲ್ಲಿ ಸಾವಿರಾರು ಜನ ಆಶ್ರಯ ಪಡೆದಿದ್ದಾರೆ. ಅಲ್ಲೀಗ ಟರ್ಕಿ ಸೇನೆಯಿಂದ ದೌರ್ಜನ್ಯ ಆರಂಭವಾಗಿದೆ’ ಎಂದು ಕುರ್ದಿಶ್‌ ಆಡಳಿತವು ಹೇಳಿಕೆಯಲ್ಲಿ ಆರೋಪಿಸಿದೆ.

₹ 355 ಕೋಟಿ ನೆರವು (ಪಿಟಿಐ ವರದಿ): ಸಿರಿಯಾದಲ್ಲಿ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಮಾನವ ಹಕ್ಕುಗಳ ಮರುಸ್ಥಾಪನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ₹ 355 ಕೋಟಿ ನೆರವು ಪ್ರಕಟಿಸಿದ್ದಾರೆ ಎಂದು ಶ್ವೇತಭವನದ ಪ್ರಕಟಿಸಿದೆ.

ಫ್ರಾನ್ಸ್‌ ಆತಂಕ: (ಪ್ಯಾರಿಸ್, ಎಎಫ್‌ಪಿ ವರದಿ): ಸಿರಿಯಾದಲ್ಲಿ ಶಿಬಿರಗಳಿಂದ ಇಸ್ಲಾಮಿಕ್‌ ಸ್ಟೇಟ್‌ನ ಕುಟುಂಬಗಳ ನೂರಾರು ಮಂದಿ ಪರಾರಿಯಾಗಿದ್ದಾರೆ ಎಂದು ಕುರ್ದಿಶ್‌ ಆಡಳಿತ ಹೇಳಿಕೆ ನೀಡಿದ್ದು, ಈ ಬೆಳವಣಿಗೆ ಕುರಿತು ಫ್ರಾನ್ಸ್‌ ಆತಂಕ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)