ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಮಾರುತ: 30 ಲಕ್ಷ ಜನ ಸ್ಥಳಾಂತರ

Last Updated 12 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಭಾರೀ ವೇಗವಾಗಿ ಬೀಸುತ್ತಿರುವ ಚಂಡಮಾರುತಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

ಸುಂಟರಗಾಳಿಯ ರಭಸಕ್ಕೆ ಚಿಬಾದಲ್ಲಿ ಕಾರು ಮಗುಚಿ, ವ್ಯಕ್ತಿ ಸಾವನ್ನಪ್ಪಿರುವುದು ವರದಿಯಾಗಿದೆ. ಗಾಳಿಯಿಂದಾಗಿ ಹಾನಿಗೊಂಡ ಮನೆಯಲ್ಲಿದ್ದ ಐವರು ಗಾಯಗೊಂಡಿದ್ದಾರೆ.

ನಗರದಲ್ಲಿ ಕಳೆದ 60 ವರ್ಷಗಳಲ್ಲೇ ಅತೀ ಹೆಚ್ಚು ಮಳೆಯಾಗಿದೆ. ಹಗಿಬಿಸ್‌(ವೇಗ) ಎಂಬ ಹೆಸರಿನ ಚಂಡಮಾರುತ ಗಂಟೆಗೆ 144 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಜಪಾನ್‌ನ ಮುಖ್ಯ ದ್ವೀಪ ಹೊಂಶುಗೆ ಅಪ್ಪಳಿಸಲಿದೆ.

ಟೋಕಿಯೊ ನಗರದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಸೃಷ್ಟಿಯಾಗಿದೆ. ರಸ್ತೆಗಳು, ರೈಲು ನಿಲ್ದಾಣಗಳು, ಬೀಚ್‌ಗಳು ನಿರ್ಜನವಾಗಿವೆ. ಟೋಕಿಯೊದ ‌ಹನೆಡಾ ವಿಮಾನ ನಿಲ್ದಾಣ ಮತ್ತು ಚಿಬಾದಲ್ಲಿರುವ ನರಿಟಾ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ತಗ್ಗು ಪ್ರದೇಶದ ಜನರಿಗೆ ಎತ್ತರದ ಸ್ಥಳಕ್ಕೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಫುಕುಷಿಮಾ ಮತ್ತು ಮಿಯಾಗಿ ಪ್ರದೇಶ ಸೇರಿದಂತೆ ಗುನ್‌ಮಾ, ಸೈಟಮಾ ಮತ್ತು ಕನಗವಾ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಶಿಜುಒಕಾ ಪ್ರದೇಶದಲ್ಲಿ ಶನಿವಾರ ಸಂಜೆ ಲಘು ಭೂಕಂಪವಾಗಿದೆ. 5.3ರಷ್ಟು ಪ್ರಬಲ ಭೂಕಂಪ ಸಂಭವಿಸಿದ್ದಾಗಿ ಅಮೆರಿಕ ಭೂಗರ್ಭ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆ ಅವಧಿಯಲ್ಲಿ ಟೋಕಿಯೊದ ದಕ್ಷಿಣ ಭಾಗದ ಕನಗವಾದಲ್ಲಿ 700 ಮಿ.ಮೀ ಮಳೆ ಸುರಿದಿದೆ. ಟೋಕಿಯೊ, ಕನಗವಾ ಸೇರಿದಂತೆ ಐದು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಭೂಕುಸಿತ, ಪ್ರವಾಹ ಆರಂಭವಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಟೋಕಿಯೊ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT