ಭಾನುವಾರ, ಜನವರಿ 26, 2020
24 °C
ದಾಂದಲೆಗೆ ಕುಮ್ಮಕ್ಕು ನೀಡಿದ ಆರೋಪ । ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ: ಟೀಕೆ

ಬ್ರಿಟನ್‌ ರಾಯಭಾರಿ ಬಂಧನ: ಇರಾನ್‌ ವಿರುದ್ಧ ಬ್ರಿಟನ್‌ ಆರೋಪ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌/ಟೆಹರಾನ್‌ : ಉಕ್ರೇನ್‌ನ ನಾಗರಿಕ ವಿಮಾನ ಪತನಗೊಂಡು, ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬ್ರಿಟನ್‌ನ ರಾಯಭಾರಿಯನ್ನು ಇರಾನ್‌ ಅಧಿಕಾರಿಗಳು ಕೆಲ ಕಾಲ ಬಂಧಿಸಿ, ಬಿಡುಗಡೆ ಮಾಡಿದ್ದಾರೆ ಎಂದು ಬ್ರಿಟನ್‌ ಭಾನುವಾರ ಆರೋಪಿಸಿದೆ.

‘ಯಾವುದೇ ಕಾರಣ ಅಥವಾ ವಿವರಣೆ ನೀಡದೇ ನಮ್ಮ ರಾಯಭಾರಿ ರಾಬ್‌ ಮ್ಯಾಕೇರ್‌ ಅವರನ್ನು ಬಂಧಿಸಿರುವುದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ’ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್‌ ರಾಬ್‌ ಹೇಳಿದ್ದಾರೆ. 

ಈ ಬಗ್ಗೆ ಈ ವರೆಗೆ ಇರಾನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಆರೋಪ–ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಘಟನೆ ವಿವರ: ಉಕ್ರೇನ್‌ನ ನಾಗರಿಕ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್‌ ತಪ್ಪೊಪ್ಪಿಕೊಂಡ ಬೆನ್ನಲ್ಲೇ, ಈ ದುರಂತದಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಟೆಹರಾನ್‌ನ ಅಮೀರ್‌ ಕಬೀರ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರು.

ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಲು ಆರಂಭಿಸಿದಾಗ, ಗದ್ದಲ ಶುರುವಾಗಿದೆ. ಪರಿಸ್ಥಿತಿ ಕೈಮೀರುವುದನ್ನು ಅರಿತ, ಪೊಲೀಸರು ಗುಂಪನ್ನು ಚದುರಿಸಿದ್ದಾರೆ.

‘ವಿಶ್ವವಿದ್ಯಾಲಯ ಆವರಣದಲ್ಲಿ ದಾಂದಲೆ ನಡೆಯಲು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ರಿಟನ್‌ನ ರಾಯಭಾರಿ ರಾಬ್‌ ಅವರ ಪ್ರಚೋದನೆಯೇ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ’ ಎಂದು ಇರಾನ್‌ನ ಸುದ್ದಿಸಂಸ್ಥೆ ಮೆಹ್ರ್‌ ವರದಿ ಮಾಡಿದೆ.

ಈ ಆರೋಪವನ್ನು ನಿರಾಕರಿಸಿರುವ ರಾಬ್‌, ‘ವಿಮಾನ ದುರಂತದಲ್ಲಿ ಮೃತರಲ್ಲಿ ಕೆಲವರು ಬ್ರಿಟಿಷ್‌ ಪ್ರಜೆಗಳೂ ಇದ್ದ ಕಾರಣ, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಯಾವುದೇ ಪ್ರತಿಭಟನೆಯಲ್ಲಿಯೂ ಪಾಲ್ಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

 ‘ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ಮತ್ತೊಂದು ಹತ್ಯಾಕಾಂಡ’

ಉಕ್ರೇನ್‌ನ ವಿಮಾನ ಹೊಡೆದುರುಳಿಸಿದ್ದನ್ನು ಒಪ್ಪಿಕೊಂಡಿರುವ ಇರಾನ್‌ ಸರ್ಕಾರ ತನ್ನ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ದಮನ ಮಾಡಲು ಮುಂದಾಗಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ. ‘ಇರಾನ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜಗತ್ತು ಗಮನಿಸುತ್ತಿದೆ. ಪ್ರತಿಭಟಿಸುತ್ತಿರುವವರ ಹತ್ಯೆಯಾಗಬಾರದು. ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ಹತ್ಯಾಕಾಂಡ ನಡೆಯಲಿದೆ’ ಎಂದು ಎಚ್ಚರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು