ಮೇ ಜೊತೆ ಸಂಘರ್ಷ: ಬ್ರೆಕ್ಸಿಟ್ ಸಚಿವ ರಾಜೀನಾಮೆ

7

ಮೇ ಜೊತೆ ಸಂಘರ್ಷ: ಬ್ರೆಕ್ಸಿಟ್ ಸಚಿವ ರಾಜೀನಾಮೆ

Published:
Updated:

ಲಂಡನ್: ಬ್ರೆಕ್ಸಿಟ್ ಕುರಿತು ಪ್ರಧಾನಿ ತೆರೆಸಾ ಮೇ ಅವರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಬ್ರೆಕ್ಸಿಟ್ ಸಚಿವ ಡೇವಿಡ್ ಡೇವಿಸ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ತೆರೆಸಾ ಅವರ‌ನ್ನು ಪದಚ್ಯುತಿಗೊಳಿಸುವ ಯೋಜನೆಯನ್ನು ತಾವು ಬೆಂಬಲಿಸಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ. 

ಬ್ರೆಕ್ಸಿಟ್ ಒಪ್ಪಂದ ಮಾತುಕತೆ ವೇಳೆ ಬ್ರಿಟನ್‌ಗೆ ಅರ್ಹ ಸ್ಥಾನಮಾನ ಕಲ್ಪಿಸುವ ಮೇ ಅವರ ಪ್ರಸ್ತಾಪಿತ ಅಂಶಗಳಿಗೆ ಸಂಸದರ ಬೆಂಬಲ ಅಗತ್ಯವಾಗಿತ್ತು. ಡೇವಿಡ್ ಅವರ ರಾಜೀನಾಮೆಯಿಂದ ಮೇ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಕನ್ಸರ್ವೇಟಿವ್ ಪಕ್ಷದಲ್ಲಿ ಬೆಳೆಯುತ್ತಿರುವ ತೆರೆಸಾ ವಿರುದ್ಧದ ಬಂಡಾಯವನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ‘ಪ್ರಧಾನಿಯಾಗಿ ತೆರೆಸಾ ನನಗಿಷ್ಟ. ಅವರು ಒಳ್ಳೆಯ ಪ್ರಧಾನಿ. ಅವರನ್ನು ಬದಲಿಸುವ ನಿರ್ಧಾರವನ್ನು ನಾನು ಬೆಂಬಲಿಸುವುದಿಲ್ಲ. ಇದು ಒಳ್ಳೆಯ ನಿರ್ಧಾರ ಅಲ್ಲ’ ಎಂದಿದ್ದಾರೆ.

ಡೇವಿಡ್ ಅವರ ನಿರ್ಗಮನವು ಪಕ್ಷದಲ್ಲಿ ಭಾರಿ ಚಟುವಟಿಕೆಗಳಿಗೆ ಕಾರಣವಾಗಿದೆ. ಮೇ ಅವರ ಬ್ರೆಕ್ಸಿಟ್ ನೀತಿಯನ್ನು ತೀವ್ರವಾಗಿ ವಿರೋಧಿಸುವ ಪಕ್ಷದ ಸದಸ್ಯರಲ್ಲಿ ಬದಲಿ ಪ್ರಧಾನಿ ಆಯ್ಕೆ ಕೂಗು ಕೇಳಿಬರುತ್ತಿದೆ. 

ಮೇ ತಿರುಗೇಟು: ಡೇವಿಡ್ ಅವರ ಸೇವೆಯನ್ನು ಪ್ರಶಂಸಿಸಿರುವ ಮೇ, ‘ಸಂಪುಟದಲ್ಲಿ ಅನುಮೋದನೆ ನೀಡಿದ ಬ್ರೆಕ್ಸಿಟ್ ನೀತಿಯ ಬಗ್ಗೆ ನೀವು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಒಪ್ಪುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಜನಮತಗಣನೆಯನ್ನು ಜಾರಿಗಳಿಸುವ ಬಗೆ ಹಾಗೂ ಈ ಸಂಬಂಧ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಬದ್ಧತೆಯಿಂದ ಈಡೇರಿಸುವ 12 ಅಂಶಗಳನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಡೇವಿಡ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !