ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಆತಂಕ

ಜಗತ್ತಿನಾದ್ಯಂತ 32 ಸಾವಿರ ದಾಟಿದ ಸಾವಿನ ಸಂಖ್ಯೆ: ಅಮೆರಿಕದಲ್ಲಿ ಗಂಭೀರ
Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಪ್ಯಾರಿಸ್‌, ವಾಷಿಂಗ್ಟನ್‌, ಟೆಹರಾನ್‌, ಲಂಡನ್‌: ‘ಪ್ರತಿಯೊಬ್ಬರು ಮನೆಯಲ್ಲೇ ಇದ್ದು, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ಪರಿಸ್ಥಿತಿ ಸುಧಾರಿಸುವ ಬದಲು ಇನ್ನಷ್ಟು ಹದಗೆಡುವ ಸಾಧ್ಯತೆಯೇ ಹೆಚ್ಚು’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ನ ಪ್ರತಿಯೊಂದು ಕುಟುಂಬಕ್ಕೂ ಪತ್ರ ಬರೆದಿರುವ ಅವರು, ’ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು.ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರಲು ಹಿಂಜರಿಯುವುದಿಲ್ಲ’ ಎಂದು ಹೇಳಿದ್ದಾರೆ.

ಸರ್ಕಾರದ ಸಲಹೆಗಳನ್ನು ಒಳಗೊಂಡಿರುವ ಪತ್ರವನ್ನು ಮೂರು ಕೋಟಿ ಕುಟುಂಬಗಳಿಗೆ ಅವರು ಕಳುಹಿಸುತ್ತಿದ್ದಾರೆ. ಇದಕ್ಕಾಗಿ 58 ಲಕ್ಷ ಪೌಂಡ್‌ ವೆಚ್ಚ ಮಾಡಲಾಗಿದೆ.

ಕೊರೊನಾ ವೈರಸ್‌ ದೃಢಪಟ್ಟ ಬಳಿಕ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಬೋರಿಸ್‌ ಜಾನ್ಸನ್‌, ’ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಕೈಗೊಂಡಿದೆ. ಆದರೆ, ನಾವೆಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದರಿಂದ ಮಾತ್ರ ನಾವು ಕಡಿಮೆ ಜೀವಗಳನ್ನು ಕಳೆದುಕೊಳ್ಳಬಹುದು ಮತ್ತು ಜನಜೀವನ ಸಹಜ ಸ್ಥಿತಿಗೆ ಬರಲು ಸಾಧ್ಯ’ ಎಂದು ಹೇಳಿದ್ದಾರೆ.

ಯುರೋಪ್‌ ರಾಷ್ಟ್ರಗಳಲ್ಲೇ ಹೆಚ್ಚು: ಕೊರೊನಾ ವೈರಸ್‌ ಸೋಂಕಿನಿಂದ ಜಗತ್ತಿನಾದ್ಯಂತ ಇದುವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಯುರೋಪ್‌ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೂ ಭೀಕರವಾಗಲಿದೆ. ಹಲವು ರಾಷ್ಟ್ರಗಳು ಸಮರ್ಪಕವಾಗಿ ಸೋಂಕಿಗೆ ಒಳಗಾಗಿರುವವರನ್ನು ಪತ್ತೆ ಮಾಡಿಲ್ಲ ಅಥವಾ ಪರೀಕ್ಷೆ ನಡೆಸಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಪೇನ್‌ನಲ್ಲಿ ಶನಿವಾರ ರಾತ್ರಿಯಿಂದ 838 ಮಂದಿ ಮೃತಪಟ್ಟಿದ್ದಾರೆ. ಇದರಿಂದ, ಸಾವಿಗೀಡಾದವರ ಸಂಖ್ಯೆ 6,528ಕ್ಕೇರಿದೆ.

ಅಮೆರಿಕದಲ್ಲಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಭಾನುವಾರದ ವೇಳೆಗೆ 2,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ ಅಮೆರಿಕದಲ್ಲಿ 1.24 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ನ್ಯೂಯಾರ್ಕ್ ನಗರ ವೈರಸ್‌ ಸೋಂಕಿಗೆ ತತ್ತರಿಸಿದೆ. ನ್ಯೂಯಾರ್ಕ್ ನಗರದಲ್ಲಿ 52 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 517 ಮಂದಿ ಸಾವಿಗೀಡಾಗಿದ್ದಾರೆ.

ಕೊವಿಡ್‌–19ನಿಂದ ಇರಾನ್‌ನಲ್ಲಿಮತ್ತೆ 123 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ, ಸಾವಿಗೀಡಾದವರ ಸಂಖ್ಯೆ 2640ಕ್ಕೆ ಏರಿದೆ.

ಶನಿವಾರ ರಾತ್ರಿಯಿಂದ ಹೊಸದಾಗಿ 2,901 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ, ದೇಶದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 38,309ಕ್ಕೆ ಏರಿಕೆಯಾಗಿದೆ.

108 ವರ್ಷದ ವೃದ್ಧೆ ಸಾವು
ಲಂಡನ್‌ (ಪಿಟಿಐ):
ಬ್ರಿಟನ್‌ನಲ್ಲಿ 108 ವರ್ಷದ ವೃದ್ಧೆಯೊಬ್ಬರು ಕೋವಿಡ್‌–19ಗೆ ಬಲಿಯಾಗಿದ್ದಾರೆ.

ಎರಡು ವಿಶ್ವಯುದ್ಧಗಳು ಮತ್ತು 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಫ್ಲ್ಯೂ ಸಂದರ್ಭದಲ್ಲಿ ಬದುಕಿದ್ದ ಈ ಅಜ್ಜಿ, ಈಗ ಕೋವಿಡ್‌–19ಗೆ ಸಾವಿಗೀಡಾದ ಅತ್ಯಂತ ಹಿರಿಯ ವಯಸ್ಸಿನವರಾಗಿದ್ದಾರೆ.

ಕೋವಿಡ್‌–19 ದೃಢಪಟ್ಟ ಕೆಲ ಗಂಟೆಗಳಲ್ಲಿ ಈ ಅಜ್ಜಿ ಸಾವಿಗೀಡಾಗಿದ್ದಾರೆ. ಏಪ್ರಿಲ್‌ 5ರಂದು ಜನ್ಮ ದಿನವನ್ನು ಆಚರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದರು.

ಸ್ಪ್ಯಾನಿಷ್‌ ಫ್ಲ್ಯೂನಿಂದ 5 ಕೋಟಿ ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT