7
ವಿಶ್ವಸಂಸ್ಥೆ ಸಭೆಯಲ್ಲಿ ಚರ್ಚೆ

ಮಕ್ಕಳು ಹಾಗೂ ಸಂಘರ್ಷ: ವರದಿಗೆ ಭಾರತ ಅಸಮಾಧಾನ

Published:
Updated:

ವಿಶ್ವಸಂಸ್ಥೆ: ‘ದೇಶದಲ್ಲಿ ಮಕ್ಕಳು ಹಾಗೂ ಸಶಸ್ತ್ರ ಗುಂಪುಗಳ ನಡುವಿನ ಸಂಘರ್ಷ ಕುರಿತಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆ್ಯಂಟೊನಿಯೊ ಗುಟೆರಸ್‌ ಅವರ ವರದಿಯಲ್ಲಿ ಸಶಸ್ತ್ರ ಸಂಘರ್ಷದ ವ್ಯಾಖ್ಯಾನ ಅಥವಾ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳಿಲ್ಲ’ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ಶಾಶ್ವತ ಉಪ ಪ್ರತಿನಿಧಿ ತನ್ಮಯ ಲಾಲ್‌, ಈ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಛತ್ತೀಸಗಡ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹಾಗೂ ಶಸ್ತ್ರಾಸ್ತ್ರ ಹೊಂದಿದ ಗುಂಪುಗಳ ನಡುವಿನ ಸಂಘರ್ಷದ ಸಮಯದಲ್ಲಿ ಮಕ್ಕಳು ತೊಂದರೆಗೆ ಒಳಗಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಛತ್ತೀಸಗಡ ಮತ್ತು ಜಾರ್ಖಂಡ್‌ನಲ್ಲಿ ನಕ್ಸಲೀಯರಿಂದ ಮಕ್ಕಳ ನೇಮಕಾತಿ ನಡೆಯುತ್ತಿರುವ ಬಗ್ಗೆಯೂ ವರದಿಯಲ್ಲಿ ಆತಂಕ ವ್ಯಕ್ತಪಡಿಸಿರುವುದಕ್ಕೆ ತನ್ಮಯ್‌ ಲಾಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಶಸ್ತ್ರಾಸ್ತ್ರ ಹೊಂದಿರುವ ಗುಂಪುಗಳಿಂದ ಬಿಡುಗಡೆ ಹೊಂದಿರುವ ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ನಮ್ಮ ಬದ್ಧತೆಯನ್ನು ಇನ್ನಷ್ಟು ಸದೃಢಗೊಳಿಸಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಹೆಚ್ಚು ಉತ್ತರದಾಯಿತ್ವ ಪ್ರದರ್ಶಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಅಗತ್ಯ’ ಎಂದೂ ಲಾಲ್‌ ಪ್ರತಿಪಾದಿಸಿದ್ದಾರೆ.

ನಾಲ್ಕರಲ್ಲಿ ಒಂದು ಮಗು ಸಂಘರ್ಷ ಪೀಡಿತ ದೇಶಕ್ಕೆ ಸೇರಿದ್ದು

ಜಗತ್ತಿನಲ್ಲಿರುವ ಒಟ್ಟು ಮಕ್ಕಳ ಸಂಖ್ಯೆಯಲ್ಲಿ 53.5 ಕೋಟಿ ಮಕ್ಕಳು ಸಂಘರ್ಷ ಇಲ್ಲವೇ ವಿಪತ್ತಿಗೆ ಈಡಾದ ದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಹೇಳಿದೆ.

ಭದ್ರತಾ ಮಂಡಳಿ ಸಭೆಗೆ ಈ ಮಾಹಿತಿ ನೀಡಿರುವ ಹೆನ್ರಿಟ್ಟಾ ಫೋರ್‌, ‘ಪ್ರತಿ ನಾಲ್ವರು ಮಕ್ಕಳಲ್ಲಿ ಒಂದು ಮಗು ಸಂಘರ್ಷ ಇಲ್ಲವೇ ವಿಪತ್ತಿನಂತಹ ಪರಿಸ್ಥಿತಿಗೆ ಸಿಲುಕಿದೆ. ಸಂಘರ್ಷ ಪೀಡಿತ ದೇಶದಲ್ಲಿನ ಮಕ್ಕಳ ಸ್ಥಿತಿ ಊಹೆಗೂ ನಿಲುಕದ್ದು’ ಎಂದು ಹೇಳಿದರು.

‘ಯೆಮನ್‌, ಮಾಲಿ ಹಾಗೂ ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಮಕ್ಕಳು ಹಾಗೂ ಯುವ ಜನತೆ ನಲುಗಿ ಹೋಗಿದ್ದಾರೆ. ಶಾಲೆಗಳ ಮೇಲೆ ಹಾಗೂ ನೆಲದಲ್ಲಿ ಹುದುಗಿಸಿಟ್ಟ ಬಾಂಬ್‌ ಸ್ಫೋಟಕ್ಕೆ ಮಕ್ಕಳು ಹಾಗೂ ಯುವ ಜನತೆ ಸಾವನ್ನಪ್ಪುತ್ತಿದ್ದಾರೆ. ಅವರಿಗೆ ತಮ್ಮ ಭವಿಷ್ಯ ಮಾತ್ರವಲ್ಲ, ತಮ್ಮ ದೇಶದ ಭವಿಷ್ಯದ ಬಗ್ಗೆಯೂ ಭರವಸೆ ಇಲ್ಲದಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !