ಮಂಗಳವಾರ, ನವೆಂಬರ್ 19, 2019
29 °C

ರೊಹಿಂಗ್ಯಾ: ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ವಿಶ್ವಸಂಸ್ಥೆ ಸೂಚನೆ

Published:
Updated:

ಬ್ಯಾಂಕಾಕ್: ಸೇನಾ ಕಾರ್ಯಾಚರಣೆಯಿಂದ ಹೊರಹಾಕಲ್ಪಟ್ಟ ರೊಹಿಂಗ್ಯಾ ಮುಸ್ಲಿಮರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಮ್ಯಾನ್ಮಾರ್‌ಗೆ ಸೂಚನೆ ನೀಡಿದ್ದಾರೆ.

ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಗದಾಪ್ರಹಾರ ನಡೆಸಿದ ಎರಡು ವರ್ಷಗಳ ನಂತರ ಅಂಗ್‌ ಸಾನ್ ಸೂಕಿ ಅವರಿಗೆ ಮೊದಲ ಬಾರಿಗೆ ಮನವಿ ಮಾಡಲಾಗಿದೆ.

ಬ್ಯಾಂಕಾಕ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ಮ್ಯಾನ್ಮಾರ್‌ ನಾಯಕಿ ಸಮ್ಮುಖದಲ್ಲಿಯೇ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು, ರೊಹಿಂಗ್ಯಾ ಮುಸ್ಲಿಮರ ದುಃಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು.

2017ರಲ್ಲಿ ರಾಖಿನೆ ರಾಜ್ಯದಲ್ಲಿ ನಡೆದ ಹಿಂಸಾಚಾರದಿಂದಾಗಿ 74 ಸಾವಿರಕ್ಕೂ ಹೆಚ್ಚು ರೋಹಿಂಗ್ಯಾ ಮುಸಲ್ಮಾನರು ವಲಸೆ ಹೋಗುವಂತಾಯಿತು. ಹೆಚ್ಚಿನವರು ನೆರೆಯ ಬಾಂಗ್ಲಾದೇಶದ ಜನದಟ್ಟಣೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ನರಮೇಧ ಎಂದು ಬಣ್ಣಿಸಿದ್ದಾರೆ. 

‘ನಿರಾಶ್ರಿತರನ್ನು ಸುರಕ್ಷಿತ ಮತ್ತು ಘನತೆಯಿಂದ ಕರೆಸಿಕೊಳ್ಳಬೇಕು. ವಾಪಸಾತಿಗೆ ಅನುಕೂಲಕರ ವಾತಾವರಣವನ್ನು ಖಾತರಿಪಡಿಸುವ ಜವಾಬ್ದಾರಿ ಮ್ಯಾನ್ಮಾರ್‌ಗೆ ಇದೆ’ ಎಂದು ಗುಟೆರೆಸ್ ಹೇಳಿದ್ದಾರೆ. ಆದರೆ, ಈ ಸಭೆಯಲ್ಲಿದ್ದ ಸೂಕಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿ (+)