ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆರಂಭ:ಬಾರದ ವಿದ್ಯಾರ್ಥಿಗಳು!

ಮೊದಲ ದಿನ ಬಿಕೋ ಎಂದ ಸರ್ಕಾರಿ ಪಿಯು ಕಾಲೇಜು
Last Updated 4 ಮೇ 2018, 7:12 IST
ಅಕ್ಷರ ಗಾತ್ರ

ಬಳ್ಳಾರಿ: ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ ಸರ್ಕಾರಿ ಕಾಲೇಜುಗಳು ಬುಧವಾರ ಆರಂಭವಾದರೂ, ದ್ವಿತೀಯ ಪಿಯು ವಿದ್ಯಾರ್ಥಿಗಳು ಬಾರದೆ ಬಿಕೋ ಎಂದವು. ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಂಡುಬಂದರು.

ವಾಡಿಕೆಗಿಂತ ಈ ಬಾರಿ ಬಹುಬೇಗ ಪ್ರಥಮ ಪಿಯುಸಿ ಪರೀಕ್ಷೆ ನಡೆಸಿರುವುದರಿಂದ, ಬೇಗನೇ ತರಗತಿಗಳು ಆರಂಭವಾಗಬೇಕು ಎಂಬ ಇಲಾಖೆಯ ಆಶಯವನ್ನು ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘ ವಿರೋಧಿಸಿತ್ತು. ಆದರೂ ಇಲಾಖೆಯು ಮೇ 2ರಿಂದಲೇ ತರಗತಿಗಳನ್ನು ಆರಂಭಿಸಬೇಕು ಎಂದು ಸೂಚಿಸಿತ್ತು.

ನಗರದ ರೇಡಿಯೋಪಾರ್ಕ್‌ ಪ್ರದೇಶದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ‘ಪ್ರಜಾವಾಣಿ’ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ, ಡಿ ದರ್ಜೆ ನೌಕರರೊಬ್ಬರನ್ನು ಹೊರತುಪಡಿಸಿದರೆ ಬೇರೆ ಯಾವ ಸಿಬ್ಬಂದಿಯೂ ಇರಲಿಲ್ಲ. ವಿದ್ಯಾರ್ಥಿಗಳೂ ಇರಲಿಲ್ಲ. ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ ಹಾಗೂ ತರಗತಿ ಕೊಠಡಿಗಳೆಲ್ಲಕ್ಕೂ ಬೀಗ ಹಾಕಲಾಗಿತ್ತು.

‘ಇದುವರೆಗೂ ಕಚೇರಿಯಲ್ಲಿ ಇದ್ದ ಪ್ರಾಂಶುಪಾಲರು ಇಲಾಖೆಯ ಸಭೆಯ ಸಲುವಾಗಿ ಈಗಷ್ಟೇ ನಿರ್ಗಮಿಸಿದರು’ ಎಂದು ಸಿಬ್ಬಂದಿ ತಿಳಿಸಿದರು.

ಚುನಾವಣೆ ಕರ್ತವ್ಯ: ‘ಉಪನ್ಯಾಸಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಥಮ ಪಿಯು ಪಾಸಾಗಿರುವವರು ರಜೆಯ ಮೋಜು ಅನುಭವಿಸುವ ಕಾತರದಲ್ಲಿದ್ದಾರೆ. ಇನ್ನೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗದ ಕಾರಣ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆಯೂ ಆರಂಭವಾಗಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಕಾಲೇಜು ಕರ್ತವ್ಯವನ್ನು ಹೇಗೆ ನಿರ್ವಹಿಸಲು ಸಾಧ್ಯ’ ಎಂದು ಹೆಸರು ಹೇಳಲು ಬಯಸದ ಉಪನ್ಯಾಸಕರೊಬ್ಬರು ಅಭಿಪ್ರಾಯಪಟ್ಟರು.

ಬಿಡುವು ಬೇಕು: ‘ಶೈಕ್ಷಣಿಕ ಚಟುವಟಿಕೆಗಳ ನಡುವೆ ವಿದ್ಯಾರ್ಥಿಗಳಿಗೆ ಬಿಡುವು ಬೇಕು. ಅವರೇನೂ ಯಂತ್ರಗಳಲ್ಲ. ಪರೀಕ್ಷೆಯನ್ನು ಬಹಳ ಬೇಗ ಮುಗಿಸಲಾಗಿದೆ ಎಂಬುದು ರಜೆಯನ್ನು ಮೊಟಕುಗೊಳಿಸಲು ಕಾರಣವಾಗಬಾರದು’ ಎಂದರು.

‘ಇಲಾಖೆಯಿಂದ ದೊರೆತ ಆದೇಶವನ್ನು ಎಲ್ಲ ಕಾಲೇಜುಗಳಿಗೆ ರವಾನಿಸಲಾಗಿದೆ. ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಬರಬೇಕಷ್ಟೇ’ ಎಂದು ಇಲಾಖೆಯ ಉಪನಿರ್ದೇಶಕಿ ಶಾಂತಾಕುಮಾರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT