ಗುರುವಾರ , ಏಪ್ರಿಲ್ 9, 2020
19 °C
ವಿಶ್ವ ಆರೋಗ್ಯ ಸಂಸ್ಥೆ ಕಚೇರಿಗೂ ವ್ಯಾಪಿಸಿದ ಸೋಂಕು, ಪಾಕ್‌ನಲ್ಲಿ ಮೊದಲ ಬಲಿ

ಕೋವಿಡ್‌–19 | ಇರಾನ್‌ನಲ್ಲಿ ಮತ್ತೆ 135 ಸಾವು, ಹೆಚ್ಚಿದ ಆತಂಕ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ನ್ಯೂಯಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಕೋವಿಡ್‌–19 ಪೀಡಿತರಾಗಿರುವುದು ದೃಢಪಟ್ಟಿದೆ. ಇನ್ನೊಂದೆಡೆ, ಜಿನೇವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಎರಡು ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಇರಾನ್‌ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದರೆ, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಅಂತರರಾಷ್ಟ್ರೀಯ ವಿಮಾನಯಾನ, ಸಾರ್ವಜನಿಕ ಸಮಾರಂಭಗಳ ರದ್ದು ಸೇರಿದಂತೆ ವಿವಿಧ ಕಟ್ಟುನಿಟ್ಟಿನ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುತ್ತಿವೆ.

ನ್ಯೂಯಾರ್ಕ್‌ನಲ್ಲಿ ಸಿಬ್ಬಂದಿಗೆ ಸೋಂಕು ತಗುಲಿದ್ದರೂ, ಇದು ಸಂಸ್ಥೆಯ ಕಾರ್ಯನಿರ್ವಹಣೆಗೆ ಅಡ್ಡಿಯಾಗದು. ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದೇವೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿ ಗುಟೆರ್ರೆಸ್‌ ಅವರ ವಕ್ತಾರ ಸ್ಟೀಫನ್‌ ದುಜಾರ್ರಿಕ್‌ ತಿಳಿಸಿದರು.

‘ಕೋವಿಡ್ 19’ ದೃಢಪಟ್ಟಿರುವ ಸಿಬ್ಬಂದಿ ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಇತರೆ ಸಿಬ್ಬಂದಿ ಸಂಪರ್ಕಕ್ಕೆ ಬಂದಿರಲಿಲ್ಲ. ನಾವು ನ್ಯೂಯಾರ್ಕ್‌ ನಗರದ ಭಾಗವಾಗಿದ್ದೇವೆ. ಸಹಜವಾಗಿ ಒಬ್ಬರಿಗೆ ಸೋಂಕಿನ ಪರಿಣಾಮವಾಗಿದೆ’ ಎಂದು ಅವರು ಹೇಳಿದರು. ನ್ಯೂಯಾರ್ಕ್‌ನಲ್ಲಿ 463 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಾವಿನ ಸಂಖ್ಯೆ 988ಕ್ಕೆ ಏರಿಕೆ  (ದುಬೈ ವರದಿ): ‘ಕೋವಿಡ್‌ಗೆ ಮತ್ತೆ 135 ಜನರು ಬಲಿಯಾಗಿದ್ದು, ಈವರೆಗೆ ಸತ್ತವರ ಸಂಖ್ಯೆ 988ಕ್ಕೆ ಏರಿದೆ’ ಎಂದು ಇರಾನ್‌ ಮಂಗಳವಾರ ತಿಳಿಸಿದೆ. ದೇಶದಲ್ಲಿ ಒಟ್ಟಾರೆ 16,169 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ಲಾಮಿಕ್‌ ಸ್ಟೇಟ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಸೋಂಕು ತಡೆ ಕ್ರಮವಾಗಿ ಇರಾನ್‌, ಮಾರ್ಚ್ 20ರಂದು ಆರಂಭವಾಗಬೇಕಿದ್ದ ತನ್ನ ಸಾಂಪ್ರದಾಯಿಕ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ.

ಒಂದೇ ದಿನ 1,987 ಹೊಸ ಪ್ರಕರಣ (ಮ್ಯಾಡ್ರಿಡ್‌): ಸ್ಪೇನ್‌ನಲ್ಲಿ ಸೋಂಕು ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದ್ದು, ಹೊಸದಾಗಿ 2,000 ಪ್ರಕರಣಗಳು ಪತ್ತೆಯಾಗಿವೆ. ಸೋಂಕು ಪೀಡಿತರ ಸಂಖ್ಯೆ 11,000ಕ್ಕೆ ಏರಿದೆ.

ಈವರೆಗೆ ಒಟ್ಟು 491 ಜನರು ಕೋವಿಡ್‌–19ನಿಂದ ಸತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 1,987 ಜನರಿಗೆ ಸೋಂಕು ತಗುಲಿದೆ ಎಂದು ತುರ್ತು ಸ್ಥಿತಿ ನಿರ್ವಹಣೆಯ ಸಂಯೋಜಕ ಫೆರ್ನಾಂಡೊ ಸಿಮನ್‌ ತಿಳಿಸಿದ್ದಾರೆ.

ಪಾಕ್‌ನಲ್ಲಿ ಮೊದಲ ಬಲಿ (ಇಸ್ಲಾಮಾಬಾದ್‌): ನೆರೆಯ ಪಾಕಿಸ್ತಾನದ ಲಾಹೋರ್‌ನಲ್ಲಿ ಸೋಂಕಿನಿಂದ ಒಬ್ಬರು ಸತ್ತಿದ್ದಾರೆ. ಇದು, ದೇಶದಲ್ಲಿ ವರದಿಯಾದ ಮೊದಲ ಪ್ರಕರಣ. ಸೋಂಕು ಪೀಡಿತರ ಸಂಖ್ಯೆ 212ಕ್ಕೆ ಏರಿದೆ. ಇರಾನ್‌ ಗಡಿಭಾಗದ ಸಿಂಧ್‌ ಪ್ರಾಂತ್ಯದಲ್ಲಿಯೇ ಸೋಂಕು ಪೀಡಿತರ ಸಂಖ್ಯೆ 155ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ (ಕೊಲಂಬೊ): ಕೊರೊನಾ ಸೋಂಕು ಭೀತಿಯಿಂದಾಗಿ ಶ್ರೀಲಂಕಾ ಮಂಗಳವಾರದಿಂದ ಜಾರಿಗೆ ಬರುವಂತೆ ಎಲ್ಲ ಅಂತರರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಶ್ರೀಲಂಕಾದಲ್ಲಿ ಇದುವರೆಗೂ 29 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು