ಗುರುವಾರ , ಅಕ್ಟೋಬರ್ 17, 2019
24 °C
ವಿಶ್ವಸಂಸ್ಥೆಯ ಸಾಮಾನ್ಯ ಸಭೆ

ಚೀನಾ ಮುಸ್ಲಿಮರ ಬಗ್ಗೆ ಮಾತನಾಡಿ: ಪಾಕ್ ಪ್ರಧಾನಿ ಇಮ್ರಾನ್‌ಗೆ ಅಮೆರಿಕ ಸಲಹೆ

Published:
Updated:
Prajavani

ವಿಶ್ವಸಂಸ್ಥೆ: ‘ಕಾಶ್ಮೀರದ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಚಿಂತಿಸುತ್ತಿರುವ ನೀವು, ಚೀನಾದಲ್ಲಿ ದಯನೀಯ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯದ ಬಗ್ಗೆ ಏಕೆ ಗಮನಹರಿಸುತ್ತಿಲ್ಲ’ ಎಂದು ಅಮೆರಿಕ ಪಾಕಿಸ್ತಾನವನ್ನು ಪ್ರಶ್ನಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಮಾತನಾಡಿದ ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಆಲಿಸ್‌ ವೆಲ್ಸ್‌, ‘ಚೀನಾದ ಕ್ಸಿಜಿಯಾಂಗ್‌ ಪ್ರಾಂತ್ಯದಲ್ಲಿ ಉಯಿಗರ್‌ ಸಮುದಾಯದ ಮತ್ತು ಟರ್ಕಿ ಭಾಷೆ ಮಾತನಾಡುವ ಹತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧನದಲ್ಲಿರಿಸಿರುವುದರ ಬಗ್ಗೆ ಯಾಕೆ ಚಕಾರವೆತ್ತಿಲ್ಲ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಟೀಕಿಸಿದ್ದಾರೆ.

‘ಚೀನಾದಲ್ಲಿ ಬಂಧಿಗಳಾಗಿರುವ ಮುಸ್ಲಿಮರ ಬಗ್ಗೆಯೂ ಪಾಕಿಸ್ತಾನ ಅನುಕಂಪವನ್ನು ತೋರಬೇಕು’ ಎಂದೂ ಅವರು ಹೇಳಿದ್ದಾರೆ.

 ‘ಚೀನಾದ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು’ ಎಂದೂ ಆಲಿಸ್‌ ಆಗ್ರಹಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನವನ್ನು ಮೇಲೆತ್ತಲು ಚೀನಾ ಹಣಕಾಸಿನ ನೆರವು ನೀಡಿದೆ.

‘ಸಯೀದ್ ವಿರುದ್ಧ ಕ್ರಮ ಕೈಗೊಳ್ಳಿ’:  ಹಫೀಜ್ ಸಯೀದ್ ಹಾಗೂ ಮಸೂದ್ ಅಜರ್‌ನಂಥ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಪಾಕಿಸ್ತಾನವನ್ನು ಅವರು ಒತ್ತಾಯಿಸಿದ್ದಾರೆ.

‘ಭಯೋತ್ಪಾದನೆಯನ್ನು ನಿಗ್ರಹಿಸುವುದು, ಗಡಿಯಾಚೆಗಿನ ಒಳನುಸುಳುವಿಕೆಯನ್ನು ತಡೆಯುವ ಕುರಿತು ಪಾಕಿಸ್ತಾನ ಗಂಭೀರ ಪ್ರಯತ್ನ ಮಾಡಬೇಕು. ಇದರ ಹೊರತಾಗಿಯೂ ಪಾಕ್‌, ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದು, ಉಗ್ರ ಹಫೀಜ್ ಸಯೀದ್‌ ಬಂಧನದಲ್ಲಿದ್ದಾನೆ. ಅಂತೆಯೇ, ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ, ಭಯೋತ್ಪಾದಕರಾದ ಮಸೂದ್ ಅಜರ್ ಅವರಂಥವರ ವಿರುದ್ಧವೂ ಪಾಕ್ ಕ್ರಮ ಕೈಗೊಳ್ಳಬೇಕು. ಇವರು ಪಾಕ್ ನೆಲದಲ್ಲಿದ್ದುಕೊಂಡೇ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವಷ್ಟು ಸಮರ್ಥರಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಿ, ಬಂಧಿತರನ್ನು ಬಿಡುಗಡೆ ಮಾಡುವ ಕುರಿತು ಭಾರತವು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಬಗ್ಗೆ ಅಮೆರಿಕಕ್ಕೆ ವಿಶ್ವಾಸವಿದೆ ಎಂದು ಆಲಿಸ್ ವೆಲ್ಸ್‌  ಹೇಳಿದ್ದಾರೆ. 

 

Post Comments (+)