ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ದೊಡ್ಡಣ್ಣ ಅಮೆರಿಕಗೆ ಕೊರೊನಾ ಸಂಕಷ್ಟ: ಒಂದೇ ದಿನ 540 ಮಂದಿ ಸಾವು 

Last Updated 31 ಮಾರ್ಚ್ 2020, 10:07 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೊರೊನಾ ವೈರಸ್‌ ಸೋಂಕಿಗೆ ಅಮೆರಿಕ ತಕ್ಕರಿಸಿದೆ. ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಹೊಂದಿದ್ದರೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 3,000ಕ್ಕೆ ಏರಿಕೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 30 ದಿನಗಳ ವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂದುವರಿಸುವಂತೆ ಭಾನುವಾರ ಸೂಚಿಸಿದ್ದರು.

ಕೋವಿಡ್‌–19 ದೃಢಪಟ್ಟ ಪ್ರಕರಣಗಳು 1,63,000 ದಾಟಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಸೋಮವಾರ ಒಂದೇ ದಿನ ಕನಿಷ್ಠ 540 ಮಂದಿ ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 3,017 ತಲುಪಿದೆ. ಕ್ರೀಡಾಂಗಣಗಳು, ರೇಸ್‌ ಟ್ರ್ಯಾಕ್‌ಗಳಲ್ಲಿ ಸೇನೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆದಿದೆ.

ತುರ್ತು ಚಿಕಿತ್ಸೆಗಳಿಗಾಗಿ ಅಮೆರಿಕದ ನೌಕಾಪಡೆಯ ಹಡಗು ನಿಯೋಜಿಸಲಾಗಿದ್ದು, ನೌಕೆ 1,000 ಹಾಸಿಗೆಗಳನ್ನು ಒಳಗೊಂಡಿದೆ. ನ್ಯೂಯಾರ್ಕ್‌ ಮತ್ತು ನ್ಯೂ ಜೆರ್ಸಿಯಲ್ಲಿ ಜನರು ಹಡ್ಸನ್‌ ನದಿಯ ಎರಡೂ ಬದಿಗಳಲ್ಲಿ ನಿಂತು ನೌಕೆಯನ್ನು ಸ್ವಾಗತಿಸಿದ್ದಾರೆ. ಬಿಳಿಯ ಬಣ್ಣ ಮತ್ತು ರೆಡ್‌ ಕ್ರಾಸ್‌ಗಳನ್ನು ಹೊದ್ದಿರುವ ನೌಕೆ ಸ್ಟ್ಯಾಚು ಆಫ್‌ ಲಿಬರ್ಟಿ ಸಮೀಪ ಹಾದು ಹೋಗಿದೆ. ನ್ಯೂಯಾರ್ಕ್‌ನಲ್ಲಿ ಆಸ್ಪತ್ರೆಗಳು ಕೊರೊನಾ ವೈರಸ್‌ ಸೊಂಕಿತರಿಂದ ತುಂಬಿ ಹೋಗಿದೆ. ಸ್ವಯಂ ಪ್ರೇರಿತರಾಗಿ ಆರೋಗ್ಯ ಸೇವೆಗಳಲ್ಲಿ ಸಹಕರಿಸಲು ಬರುವಂತೆ ಕೋರಲಾಗಿದೆ. ಸೋಂಕು ರಹಿತರು, ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳು ನೌಕಾಪಡೆಯ ಕಂಫರ್ಟ್‌ ನೌಕೆಯಲ್ಲಿ ನಡೆಯಲಿವೆ.

'ಬಹುತೇಕ ನಾವು ಎಲ್ಲರೂ ವೈರಸ್‌ ಸೋಂಕಿಗೆ ಒಳಗಾಗಿದ್ದೇವೆ. ಕಹಿ ಸತ್ಯವನ್ನು ನಾವು ಅರ್ಥೈಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ' ಎಂದು ನರ್ಸ್‌ ಒಬ್ಬರು ಹೇಳಿಕೊಂಡಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಅಮೆರಿಕದಲ್ಲಿ ದೃಢಪಟ್ಟಿದೆ. ಪ್ರಕರಣಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. 10 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ ಕೊರೊನಾ ವೈರಸ್‌ ಪರೀಕ್ಷೆ ನಡೆಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಆದರೆ, ಆ ಪ್ರಮಾಣ ಒಟ್ಟು ಜನ ಸಂಖ್ಯೆಯಲ್ಲಿ ಶೇ 3ರಷ್ಟು ಮಾತ್ರ.

ಕ್ಯಾಲಿಫೋರ್ನಿಯಾದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕೋವಿಡ್‌–19 ದೃಢಪಟ್ಟವರ ಸಂಖ್ಯೆ ದುಪ್ಪಟ್ಟಾಗಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಅಗತ್ಯವಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಟೆಂಟ್‌ಗಳನ್ನು ನಿರ್ಮಾಣ ಮಾಡಿ 68 ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಗಳನ್ನು ಸೃಷ್ಟಿಸಲಾಗುತ್ತಿದೆ. ವೆಂಟಿಲೇಟರ್‌ಗಳು ಹಾಗೂ ಸುರಕ್ಷತಾ ಸಾಧನಗಳ ಪೂರೈಕೆ ಇಲ್ಲದೆ ಕೊರತೆ ಎದುರಾಗಿದ್ದು, ಫೋರ್ಡ್‌ ಮೋಟಾರ್ ಕಂಪನಿ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಲು ಮುಂದಾಗಿದೆ. ಮುಂದಿನ 100 ದಿನಗಳಲ್ಲಿ 50,000 ವೆಂಟಿಲೇಟರ್‌ಗಳನ್ನು ತಯಾರಿಸುವುದಾಗಿ ಹೇಳಿದೆ. ಜನರಲ್‌ ಎಲೆಕ್ಟ್ರಿಕ್ಸ್‌ನ ಹೆಲ್ತ್‌ಕೇರ್‌ ಘಟಕದ ಸಹಕಾರದೊಂದಿಗೆ ತಿಂಗಳಿಗೆ 30,000 ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಬಹುದು ಎಂದಿದೆ.

ಮನೆಯಲ್ಲಿ ಉಳಿಯಿರಿ...

ಏಪ್ರಿಲ್‌ ಅಂತ್ಯದ ವರೆಗೂ ಮನೆಯಲ್ಲಿಯೇ ಉಳಿಯುವ ಆದೇಶವನ್ನು ಪಾಲಿಸುವಂತೆ ಅಮೆರಿಕದ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಚೀನಾದಿಂದ ವ್ಯಾಪಿಸಿದ ಕೊರೊನಾ ವೈರಸ್‌ ಸೋಂಕು ಜಗತ್ತಿನಾದ್ಯಂತ 7,00,000ಕ್ಕೂ ಅಧಿಕ ಮಂದಿಗೆ ತಗುಲಿದೆ. 30 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 1,00,000–2,00,000 ಜನರು ಸೋಂಕಿಗೆ ಬಲಿಯಾಗಬಹುದು ಎಂದು ವಿಜ್ಞಾನಿ ಡಾ.ಆಂಥೊನಿ ಫೌಸಿ ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT