ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕ ಮಾರ್ಗ ಬಂದ್‌

ಅಮೆರಿಕ ವಿಧಿಸಿದ ದಿಗ್ಬಂಧನಕ್ಕೆ ಇರಾನ್‌ ತೀವ್ರ ಆಕ್ರೋಶ
Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ದುಬೈ(ರಾಯಿಟರ್ಸ್‌): ಅಮೆರಿಕವು ಹೊಸದಾಗಿ ಮತ್ತೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದರಿಂದ ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾರ್ಗವನ್ನು ಮುಚ್ಚಿದಂತಾಗಿದೆ ಎಂದು ಇರಾನ್‌ ಹೇಳಿದೆ. ಈ ಮೂಲಕ ಶಾಂತಿಗಾಗಿ ಇದ್ದ ಏಕೈಕ ಮಾರ್ಗವನ್ನು ಅಮೆರಿಕ ಕೈಬಿಟ್ಟಂತಾಗಿದೆ ಎಂದು ಅದು ಆರೋಪಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಇರಾನ್‌ನ ಪ್ರಮುಖ ನಾಯಕ ಅಯಾತೊಲ್ಲಹ್‌ ಅಲಿ ಖಮೇನಿ ಮತ್ತು ಇತರ ಎಂಟು ಹಿರಿಯ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ಹೇರುವ ಆದೇಶಕ್ಕೆ ಸಹಿ ಹಾಕಿದ್ದರು. ವಿದೇಶಾಂಗ ಸಚಿವ ಮೊಹಮ್ಮದ್‌ ಜಾವೇದ್‌ ಝರಿಫ್‌ ವಿರುದ್ಧ ಈ ವಾರಾಂತ್ಯಕ್ಕೆ ದಿಗ್ಬಂಧನ ಹೇರುವ ನಿರೀಕ್ಷೆ ಇದೆ.

ಕಳೆದ ವಾರ ಅಮೆರಿಕದ ಬೇಹುಗಾರಿಕಾ ಕ್ಷಿಪಣಿಯನ್ನು ಇರಾನ್‌ ಹೊಡೆದುರುಳಿಸಿದ ಬೆನ್ನಲ್ಲೇ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

‘ಇರಾನ್‌ನ ಪ್ರಮುಖ ಮುಖಂಡರು ಮತ್ತು ರಾಜತಾಂತ್ರಿಕ ಮುಖಂಡರ ಮೇಲೆ ಅನಗತ್ಯವಾಗಿ ಹಲವಾರು ದಿಗ್ಬಂಧನಗಳನ್ನು ವಿಧಿಸುವುದರಿಂದ ರಾಜತಾಂತ್ರಿಕ ಮಾರ್ಗವನ್ನು ಶಾಶ್ವತವಾಗಿ ಮುಚ್ಚಿದಂತಾಗುತ್ತದೆ’ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್‌ ಮೌಸವಿ ಕೂಡ ಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ಇರುವ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ವ್ಯವಸ್ಥೆಯನ್ನುಟ್ರಂಪ್‌ ಅವರ ಹತಾಶ ಆಡಳಿತವು ಹಾಳುಗೆಡವುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಖಮೇನಿ ಅವರು ವಿದೇಶದಲ್ಲಿ ಯಾವುದೇ ಆಸ್ತಿಪಾಸ್ತಿ ಹೊಂದಿಲ್ಲ. ಆದ್ದರಿಂದ ಈ ರೀತಿಯ ದಿಗ್ಬಂಧನದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಶ್ವೇತಭವನದ ಈ ನಿಲುವುಗಳು ’ಬುದ್ಧಿಮಾಂದ್ಯ ರೀತಿಯಲ್ಲಿ ಗೋಚರಿಸುತ್ತಿವೆ’ ಎಂದು ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹಾನಿ ಹೇಳಿದ್ದಾರೆ.

ಇರಾನ್ ಮುಕ್ತ ಅವಕಾಶ ಬಳಸಿಕೊಳ್ಳಬೇಕು: ಇರಾನ್‌ 2015ರ ಅಣುಒಪ್ಪಂದದ ಷರತ್ತನ್ನು ಹೊರತುಪಡಿಸಿ ಮಾತುಕತೆಗೆ ಸಿದ್ಧವಾಗಿದ್ದರೆ ದ್ವಿರಾಷ್ಟ್ರ ಮಾತುಕತೆ ಸಾಧ್ಯ ಎಂದುಡೊನಾಲ್ಡ್‌ ಟ್ರಂಪ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಮತ್ತೆ ಹೇಳಿದ್ದಾರೆ.

ಇರಾನ್‌ ತನ್ನ ಅಣ್ವಸ್ತ್ರ ಚಟುವಟಿಕೆಯಿಂದ ಹಿಂದೆ ಸರಿದರೆ, ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತುಕತೆಗೆ ಅಮೆರಿಕ ಅಧ್ಯಕ್ಷರು ಅವಕಾಶವನ್ನು ಮುಕ್ತವಾಗಿ ಇರಿಸಿದ್ದಾರೆ. ಇರಾನ್‌ ಈ ಮುಕ್ತ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಜೆರುಸಲೆಂನಲ್ಲಿ ಬೋಲ್ಟನ್‌ ಹೇಳಿದ್ದಾರೆ.ತನ್ನ ಬೇಹುಗಾರಿಕಾ ಡ್ರೋನ್‌ಅನ್ನು ಹೊಡೆದುರುಳಿಸಿದ ಆರೋಪವನ್ನು ಅಮೆರಿಕವು ಇರಾನ್‌ ಮೇಲೆ ಹೊರಿಸಿದ್ದರೆ, ಅತ್ತ ಇರಾನ್‌ ಈ ಆರೋಪವನ್ನು ತಳ್ಳಿ ಹಾಕಿದೆ.

ಶಾಂತಿ ಕಾಪಾಡಲು ಚೀನಾ ಸಲಹೆ

ಬೀಜಿಂಗ್‌ (ಎಎಫ್‌ಪಿ): ಇರಾನ್‌ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರ್ಥಿಕ ದಿಗ್ಬಂಧನ ವಿಧಿಸುವ ಮೂಲಕ ಎರಡೂ ರಾಷ್ಟ್ರಗಳ ನಡುವೆ ಹದಗೆಡುತ್ತಿರುವ ಸಂಬಂಧದ ಬಗ್ಗೆ ಚೀನಾ ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಮತ್ತು ಸಂಯಮವನ್ನು ಪಾಲಿಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದೆ.

ಕಣ್ಣುಮುಚ್ಚಿಕೊಂಡು ಕೇವಲ ಒತ್ತಡ ತಂತ್ರವನ್ನಷ್ಟೇ ಅನುಸರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ರೀತಿಯ ತಂತ್ರಗಳು ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಪ್ರಾದೇಶಿಕ ಅಶಾಂತಿ ಸೃಷ್ಟಿಸುತ್ತವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುಆಂಗ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಷ್ಯಾ ಬೆಂಬಲ

ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೋಲಾಯ್‌ ಪಟ್ರುಶೇ ಇರಾನ್‌ ನಡೆಯನ್ನು ಬೆಂಬಲಿಸಿದ್ದಾರೆ. ತನ್ನ ವ್ಯಾಪ್ತಿಯಲ್ಲಿದ್ದ ಡ್ರೋನ್‌ ಅನ್ನು ಅಮೆರಿಕ ಹೊಡೆದುರಳಿಸಿದೆ. ಅತ್ತ ಸಮುದ್ರದಲ್ಲಿ ಟ್ಯಾಂಕರ್‌ಗಳ ಮೇಲೆ ಇರಾನ್‌ ದಾಳಿ ಮಾಡಿದೆ ಎಂಬ ಸಾಕ್ಷಿಯು ಅತ್ಯಂತ ನಂಬಿಕೆಗೆ ಅರ್ಹವಾಗಿಲ್ಲ. ಅದನ್ನು ಆಧರಿಸಿ ಯಾವುದೇ ನಿರ್ಧಾರಕ್ಕೆ ಬರಲಾಗದು ಎಂದು ಹೇಳಿದ್ದಾರೆ.

‘ಕಾಲ ಪಕ್ವವಾಗಿಲ್ಲ’

ವಿಶ್ವಸಂಸ್ಥೆಯಲ್ಲಿ ಇರಾನ್‌ ರಾಯಭಾರಿ ಆಗಿರುವ ಮಜಿದ್‌ ತಕ್ತ್‌ ರವಂಚಿ ಅವರು ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆಗೆ ಈಗ ಕಾಲ ಪಕ್ವವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯ ಸಭೆ ನಡೆಸಿದ ಸಂದರ್ಭದಲ್ಲಿ ಮಜಿದ್‌ ಅವರು ಸುದ್ದಿಗಾರರೊಡನೆ ಮಾತನಾಡಿ ‘ಅಮೆರಿಕವು ಇರಾನ್‌ ಮೇಲೆ ಆರ್ಥಿಕ ಯುದ್ಧ ಸಾರುವುದನ್ನು ನಿಲ್ಲಿಸಬೇಕು’ ಬೆದರಿಕೆ ಒಡ್ಡುವರರ ಜೊತೆ ಮಾತುಕತೆ ಆರಂಭಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT