ಸೋಮವಾರ, ಅಕ್ಟೋಬರ್ 21, 2019
23 °C

ಕಾಶ್ಮೀರದಲ್ಲಿ ಮಹಿಳೆಯರ ಕುರಿತು ಟೀಕೆ: ಪಾಕ್‌ಗೆ ಚಾಟಿ ಬೀಸಿದ ಭಾರತ

Published:
Updated:

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ರಾಜಕೀಯ ಲಾಭಕ್ಕಾಗಿ ಮಹಿಳೆಯರ ಹಕ್ಕುಗಳನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿರುವ ಪಾಕಿಸ್ತಾನದ ಕ್ರಮವನ್ನು ಭಾರತ ತೀವ್ರವಾಗಿ ಟೀಕಿಸಿದೆ.

ಗೌರವದ ಹೆಸರಿನಲ್ಲಿ ಮಹಿಳೆಯರ ಬದುಕುವ ಹಕ್ಕುಗಳನ್ನೇ ಕಸಿಯುವ ದೇಶವೊಂದು ಭಾರತ ಕುರಿತು ಆಧಾರವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ವಿಪರ್ಯಾಸ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಅಭಿಯಾನದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಹೇಳಿದರು.

ಸಾಮಾನ್ಯ ಸಭೆಯ ತೃತೀಯ ಸಮಿತಿಯ ಗೋಷ್ಠಿಯಲ್ಲಿ ’ಮಹಿಳೆಯರ ಪ್ರಗತಿ‘ ಕುರಿತು ಮಾತನಾಡಿದ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಭಾರತೀಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ವಿಜಯಲಕ್ಷ್ಮಿ ಪಂಡಿತ್‌ ಅವರಿಂದ ಹಿಡಿದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹಿಳಾ ವಿಜ್ಞಾನಿಗಳವರೆಗೆ ಭಾರತೀಯ ಮಹಿಳೆಯರು ಅದೆಷ್ಟೋ ಜನರಿಗೆ ಸ್ಫೂರ್ತಿ ನೀಡುವಂತಹ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಭಾರತವು ನಿರಂತರ ಪ್ರಯತ್ನ ಮಾಡುತ್ತಿದೆ. ಮಹಿಳಾ ಹಕ್ಕುಗಳನ್ನು ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಹೇಳಿದರು. 

ತ್ರಿಪಾಠಿ ಅವರು ನೇರವಾಗಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇರುವುದರಿಂದ ಅಲ್ಲಿನ ಮಹಿಳೆಯರಿಗೆ ಸಮಸ್ಯೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ತಮ್ಮ ನಿರ್ಗಮನ ಭಾಷಣದಲ್ಲಿ ಇತ್ತೀಚೆಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತ್ರಿಪಾಠಿ ಮಾತುಗಳು ಗಮನಾರ್ಹವಾಗಿವೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)