7
ಮಾನವ ಕಳ್ಳಸಾಗಣೆ, ಬಲವಂತದ ಮದುವೆ, ಲೈಂಗಿಕ ದಾಸ್ಯ l ಥಾಮ್ಸನ್ ರಾಯಿಟರ್ಸ್ ಪ್ರತಿಷ್ಠಾನದ ಸಮೀಕ್ಷೆ

ಹೆಣ್ಣುಮಕ್ಕಳಿಗೆ ಭಾರತದಲ್ಲೇ ಹೆಚ್ಚು ಅಪಾಯ

Published:
Updated:
Lack, violation of human rights liberty. Young lonely woman sittingSex trafficking

ಲಂಡನ್: ಮಾನವ ಕಳ್ಳಸಾಗಣೆ, ಬಲವಂತದ ಮದುವೆ ಮತ್ತು ಕೆಲಸ ಹಾಗೂ ಲೈಂಗಿಕ ದಾಸ್ಯದ ವಿಚಾರದಲ್ಲಿ ಮಹಿಳೆಯರಿಗೆ ಭಾರತವು ವಿಶ್ವದಲೇ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಥಾಮ್ಸನ್ ರಾಯಿಟರ್ಸ್ ಪ್ರತಿಷ್ಠಾನ ಹೇಳಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಲಿಬಿಯಾ ಮತ್ತು ಮ್ಯಾನ್ಮಾರ್‌ಗಳಿವೆ. ನೈಜೀರಿಯಾ ಮತ್ತು ರಷ್ಯಾಗಳು ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿವೆ.

ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಜಾಗತಿಕ ಮಟ್ಟದಲ್ಲಿ ದುಡಿಯುತ್ತಿರುವ 550 ಪರಿಣತರ ಮತವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

‘ಭಾರತದಲ್ಲಿ ಈಗಲೂ ಹೆಣ್ಣು ಮಕ್ಕಳನ್ನು ಕೀಳು ಮತ್ತು ಎರಡನೇ ದರ್ಜೆಯ ವ್ಯಕ್ತಿಗಳಂತೆಯೇ ನೋಡ ಲಾಗುತ್ತಿದೆ. 2016ರಲ್ಲಿ ಭಾರತದಲ್ಲಿ ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡಿದ 15,000 ಪ್ರಕರಣಗಳು ದಾಖಲಾಗಿವೆ. ಅಷ್ಟೂ ಹೆಣ್ಣುಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು. ಕೆಲಸ ಕೊಡಿಸುವುದಾಗಿ ಮತ್ತು ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಅವರನ್ನು ಲೈಂಗಿಕ ವೃತ್ತಿಗೆ ಮತ್ತು ಮನೆ ದಾಸ್ಯಕ್ಕೆ ದೂಡಲಾಗಿದೆ. ಜಗತ್ತಿನ ಬೇರೆಲ್ಲೆಡೆಗಿಂತ ಭಾರತದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸ್ಥಿತಿ ಅತ್ಯಂತ ದುರ್ಬರವಾಗಿದೆ’ ಎಂದು ರೆಸ್ಕ್ಯು ಫೌಂಡೇಷನ್‌ನ ತ್ರಿವೇಣಿ ಆಚಾರ್ಯ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ತ್ರಿವೇಣಿ ಸಹ ಭಾಗವಹಿಸಿದ್ದರು.

2011ರಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಈಗ ಮೊದಲನೇ ಸ್ಥಾನ ತಲುಪಿರುವುದಕ್ಕೆ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಭಾರತ ಸರ್ಕಾರ ಈ ಸಮೀಕ್ಷಾ ವರದಿಯನ್ನು ತಿರಸ್ಕರಿಸಿದೆ.

‘ಈ ಸಮೀಕ್ಷೆಯು ದೋಷಪೂರಿತವಾಗಿದೆ. ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನವನ್ನು ನಡೆಸಿಲ್ಲ. ಬದಲಿಗೆ ಕೆಲವೇ ಮಂದಿಯ ಅಭಿಪ್ರಾಯಗಳನ್ನೇ ಅಂತಿಮವೆಂದು ಪರಿಗಣಿಸಲಾಗಿದೆ. ಸಮೀಕ್ಷೆಯಲ್ಲಿ ಕೇಳಿರುವ ಹಲವು ಪ್ರಶ್ನೆಗಳು ಎಲ್ಲಾ ದೇಶಗಳಿಗೂ ಅನ್ವಯಿಸುವುದಿಲ್ಲ. ಭಾರತದಲ್ಲಿ ಈಚಿನ ವರ್ಷಗಳಲ್ಲಿ ಆಗಿರುವ ಸುಧಾರಣೆಯನ್ನು ಈ ರೀತಿಯ ಸಮೀಕ್ಷೆ ಮತ್ತು ತೀರ್ಪು ಮರೆಮಾಚುತ್ತದೆ. ಸಮೀಕ್ಷೆಗೆ ಒಳಪಡಿಸಿದ ಹಲವು ರಾಷ್ಟ್ರಗಳಲ್ಲಿ ಈಗಲೂ ಮಹಿಳೆಯರ ಲಿಂಗಚ್ಛೇಧ// ನಡೆಯುತ್ತದೆ, ಮಹಿಳೆಯರನ್ನು ಕಲ್ಲು ಹೊಡೆದು ಸಾಯಿಸಲಾಗುತ್ತದೆ. ಭಾರತದಲ್ಲಿ ಅಂತಹ ಕೆಟ್ಟ ಆಚರಣೆಗಳು ಇಲ್ಲ. ಹೀಗಾಗಿ ಭಾರತವು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿರಲು ಸಾಧ್ಯವಿಲ್ಲ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿದೆ.

‘ಸಮೀಕ್ಷೆಯಲ್ಲಿ ಬೆರಳೆಣಿಕೆಯ ಮಂದಿಯಷ್ಟೇ ಭಾಗವಹಿಸಿದ್ದಾರೆ. ಭಾರತದಲ್ಲಿನ ಮಹಿಳೆಯರಿಗೆ ತಿಳಿವಳಿಕೆ ಇದೆ. ಹೀಗಾಗಿ ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇರಲು ಸಾಧ್ಯವೇ ಇಲ್ಲ. ಭಾರತದ ನಂತರದ ಸ್ಥಾನದಲ್ಲಿರುವ ದೇಶಗಳಲ್ಲಿ ಮಹಿಳೆಯರು ಮುಕ್ತವಾಗಿ ಮಾತನಾಡುವ ಸ್ಥಿತಿಯೂ ಇಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

 

ಕಾಂಗ್ರೆಸ್ ಪ್ರಶ್ನೆ: ‘2011ರಲ್ಲಿ ಥಾಮ್ಸನ್ ರಾಯಿಟರ್ಸ್ ಸಮೀಕ್ಷೆಯ ವರದಿ ಪ್ರಕಟಿಸಿದಾಗ, ಭಾರತವು ಮಹಿಳೆಯರಿಗೆ ನಾಲ್ಕನೇ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಹೇಳಿತ್ತು. ಆಗ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿತ್ತು. ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ‘ಭಾರತದಲ್ಲಿ ಮಹಿಳೆಯರಿಗೆ ಯಾವಾಗ ಭದ್ರತೆ ದೊರೆಯುತ್ತದೆಯೋ?’ ಎಂದು ಟ್ವೀಟ್ ಮಾಡಿದ್ದರು. ಈಗಿನ ವರದಿಯ ಬಗ್ಗೆಯೂ ಮೋದಿ ಅವರು ಟ್ವೀಟ್ ಮಾಡುತ್ತಾರೆಯೇ’ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.

ಫುಟ್‌ಬಾಲ್ ವರ್ಲ್ಡ್‌ಕಪ್‌ ಕ್ರೀಡಾಕೂಟದಿಂದಾಗಿ ವೇಶ್ಯಾ ದಂಧೆ ಹೆಚ್ಚಳವಾಗಿದೆ: ವಿಶ್ವಸಂಸ್ಥೆ

ಇರಾಕ್, ಸಿರಿಯಾ ಮತ್ತು ಲಿಬಿಯಾದಲ್ಲಿನ ಆಂತರಿಕ ಸಂಘರ್ಷದಿಂದಾಗಿ ಸುರಕ್ಷಿತ ದೇಶಗಳಿಗೆ ವಲಸೆ ಹೋಗುತ್ತಿರುವವರು ಮಾನವ ಕಳ್ಳಸಾಗಣೆದಾರರ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ವಾಕ್ ಫ್ರೀ ಫೌಂಡೇಷನ್ ಹೇಳಿವೆ.

ಲಿಬಿಯಾದ ಬಂದರು ಮತ್ತು ಗಡಿ ಪ್ರದೇಶಗಳು ಉಗ್ರರ ಹಿಡಿತದಲ್ಲೇ ಇವೆ. ಅಲ್ಲಿಗೆ ಬರುವ ನಿರಾಶ್ರಿತರನ್ನು ಹಿಡಿದು ‘ಗುಲಾಮರ ಸಂತೆ’ಯಲ್ಲಿ ಹರಾಜು ಹಾಕಲಾಗುತ್ತಿದೆ. ಬಾಲಕಿಯರಿಗೆ ಬಲವಂತವಾಗಿ ಮದುವೆ ಮಾಡಿಸಲಾಗುತ್ತಿದೆ. ಯೂರೋಪ್‌ನ ಕೆಲವು ದೇಶಗಳಿಗೆ ಲೈಂಗಿಕ ದಾಸಿಯರನ್ನಾಗಿ ಮಾರಾಟ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಮ್ಯಾನ್ಮಾರ್‌ನಲ್ಲಿನ ಸಂಘರ್ಷದ ಕಾರಣ ಬಾಂಗ್ಲಾದೇಶದತ್ತ ವಲಸೆ ಹೋದ ರೋಹಿಂಗ್ಯಾ ಸಮುದಾಯದ ಜನರಲ್ಲಿ ಸಾವಿರಾರು ಮಂದಿಯನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ವಾಕ್ ಫ್ರೀ ಫೌಂಡೇಷನ್ ಹೇಳಿದೆ.

ರಷ್ಯಾದಿಂದ ಯೂರೋಪ್‌ನ ಇತರ ರಾಷ್ಟ್ರಗಳಿಗೆ ಲಕ್ಷಾಂತರ ಮಹಿಳೆಯರು ಮತ್ತು ಬಾಲಕಿಯರನ್ನು ಸಾಗಿಸಲಾಗಿದೆ. ಕಠಿಣ ವೀಸಾ ನೀತಿಯ ಕಾರಣ ರಷ್ಯಾಕ್ಕೆ ಮಾನವರನ್ನು ಕಳ್ಳಸಾಗಣೆ ಮಾಡುವುದು ಸಾಧ್ಯವಿಲ್ಲ. ಆದರೆ ಈಗ ವರ್ಲ್ಡ್‌ಕಪ್ ಫುಟ್‌ಬಾಲ್ ಕ್ರೀಡಾಕೂಟ ನಡೆಯುತ್ತಿರುವುದರಿಂದ ಕಳ್ಳಸಾಗಣೆ ಸುಲಭವಾಗಿದೆ. ಪಂದ್ಯದ ಟಿಕೆಟ್ ಮತ್ತು ಕ್ರೀಡಾಪಟುಗಳ ಫ್ಯಾನ್‌ ಪಾಸ್ ಇದ್ದವರು ವೀಸಾ ಇಲ್ಲದೆಯೇ ರಷ್ಯಾ ಪ್ರವೇಶಿಸಬಹುದು. ಈ ಅವಕಾಶವನ್ನು ಬಳಸಿಕೊಂಡು ನೈಜೀರಿಯಾ, ಮ್ಯಾನ್ಮಾರ್, ಚೀನಾ ಮತ್ತು ಥಾಯ್ಲೆಂಡ್‌ಗಳಿಂದ ರಷ್ಯಾಕ್ಕೆ ಮಹಿಳೆಯರನ್ನು ಸಾಗಿಸಲಾಗುತ್ತಿದೆ ಎಂದು ಅದು ಹೇಳಿದೆ.

**

4 ಕೋಟಿ -ವಿಶ್ವದಲ್ಲಿ ಈ ದಂಧೆಗೆ ತುತ್ತಾಗಿರುವವರ ಸಂಖ್ಯೆ

2.9 ಕೋಟಿ -ದಂಧೆಗೆ ತುತ್ತಾಗಿರುವವರಲ್ಲಿ ಮಹಿಳೆಯರು ಮತ್ತು ಬಾಲಕಿಯರು

₹ 10.25 ಲಕ್ಷ ಕೋಟಿ- (15,000 ಕೋಟಿ ಡಾಲರ್)- ದಂಧೆಯ ವಾರ್ಷಿಕ ವಹಿವಾಟಿನ ಮೊತ್ತ
**
ಮಾನವ ಕಳ್ಳಸಾಗಣೆ ಸಮಸ್ಯೆ ಜಾಗತಿಕವಾದುದು. ಆದರೆ ಹೆಣ್ಣುಮಕ್ಕಳು ತಮಗೆ ಹೊರೆ ಮತ್ತು ಗಂಡು ಮಕ್ಕಳಿಗಿಂತ ಕೀಳು ಎಂಬ ಭಾವನೆ ಭಾರತದ ಗ್ರಾಮೀಣ ಭಾಗದ ಬಹುತೇಕ ಪೋಷಕರಲ್ಲಿ ಈಗಲೂ ಇದೆ
– ತ್ರಿವೇಣಿ ಆಚಾರ್ಯ, ರೆಸ್ಕ್ಯು ಫೌಂಡೇಷನ್‌
**
ಯೋಗಾಸನದ ವಿಡಿಯೊ ಮಾಡಿಕೊಂಡು ನಮ್ಮ ಪ್ರಧಾನಿ ಉದ್ಯಾನದಲ್ಲಿ ಓಡಾಡುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಭಾರತವು ಅಫ್ಗಾನಿಸ್ತಾನ, ಸಿರಿಯಾಗಳನ್ನು ಹಿಂದಿಕ್ಕಿದೆ. ಎಂತಹ ನಾಚಿಕೆಯ ವಿಷಯ
– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
**
ಪಿತೃಪ್ರಧಾನ ಮತ್ತು ಸ್ತ್ರೀದ್ವೇಷದಿಂದ ನಮ್ಮ ಇತಿಹಾಸ ತುಂಬಿಹೋಗಿದೆ. ನಮ್ಮಲ್ಲಿ ಈಗಲೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ, ಆಸ್ತಿ ಉತ್ತರಾಧಿಕಾರ ನೀಡಲು ಹೆಣಗುತ್ತೇವೆ, ಸಮಾನ ವೇತನ ಇಲ್ಲ... ಇವೆಲ್ಲಾ ಅತ್ಯಂತ ಆಳವಾದ ಸಮಸ್ಯೆಗಳು
– ಅಲಂಕೃತ ಶ್ರೀವಾಸ್ತವ, ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಖಾ ಚಿತ್ರದ ನಿರ್ದೇಶಕಿ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !