ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಸ್‌ ಏಂಜಲಿಸ್‌ನಲ್ಲಿ ಯೋಗ ವಿಶ್ವವಿದ್ಯಾಲಯ ಆರಂಭ: ಭಾರತದ ಹೊರಗೆ ಮೊದಲ ವಿವಿ

Last Updated 24 ಜೂನ್ 2020, 6:43 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಾರತದ ಹೊರಗೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯವನ್ನು ಅಮೆರಿಕದಲಾಸ್‌ ಏಂಜಲಿಸ್‌ನಲ್ಲಿ ಮಂಗಳವಾರ ಆರಂಭಿಸಲಾಯಿತು.

ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರಂಭಿಸಲಾಗಿರುವ ಈ ಶೈಕ್ಷಣಿಕ ಸಂಸ್ಥೆಗೆ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್‌ ಮತ್ತು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸಲೇಟ್‌ ಜನರಲ್‌ ಕಚೇರಿಯಲ್ಲಿ ನಡೆದ ‘ವರ್ಚುವಲ್‌’ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.

ಭಾರತದ ಖ್ಯಾತ ಯೋಗ ಗುರು ಮತ್ತು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ. ಎಚ್‌. ಆರ್‌. ನಾಗೇಂದ್ರ ಅವರು ಈ ವಿಶ್ವವಿದ್ಯಾಲಯದ ಮೊದಲ ಅಧ್ಯಕ್ಷರಾಗಿದ್ದಾರೆ.

ವೈಜ್ಞಾನಿಕ ತತ್ವಗಳು ಮತ್ತು ಆಧುನಿಕ ಸಂಶೋಧನೆ ಅಡಿಯಲ್ಲಿ ಆನ್‌ಲೈನ್‌ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಈ ವಿಶ್ವವಿದ್ಯಾಲಯ ಮೂಲಕ ನೀಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆಗಸ್ಟ್‌ 24ರಿಂದ ‘ವರ್ಚುವಲ್‌’ ವ್ಯವಸ್ಥೆ ಮೂಲಕ ಆರಂಭವಾಗಲಿವೆ.

ಈ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರನ್ನು ಭಾರತದ ಮೊದಲ ಯೋಗ ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.

‘ಈ ವಿಶ್ವವಿದ್ಯಾಲಯದ ಮೂಲಕ ಪೂರ್ವ ಮತ್ತು ಪಶ್ಚಿಮಗಳಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಪೂರ್ವ ರಾಷ್ಟ್ರದಲ್ಲಿ ಯೋಗ ಅತ್ಯುತ್ತಮವಾಗಿದ್ದರೆ, ಪಶ್ಚಿಮದಲ್ಲಿ ಆಧುನಿಕ ವಿಜ್ಞಾನದ ಸಂಶೋಧನೆಯಲ್ಲಿ ಅಪಾರ ಪ್ರಗತಿ ಸಾಧಿಸಲಾಗಿದೆ. ಅಲೋಪತಿ ಮತ್ತು ಆಯುಷ್‌ ವ್ಯವಸ್ಥೆಗಳ ಮೂಲಕ ಸಮಗ್ರವಾದ ಆರೋಗ್ಯ ರಕ್ಷಣೆಯನ್ನು ಜಗತ್ತಿಗೆ ಒದಗಿಸುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲಾಗುವುದು’ ಎಂದು ನಾಗೇಂದ್ರ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮುರುಳೀಧರನ್‌, ‘ಅಮೆರಿಕದ ಮೂಲಕ ಇಡೀ ಜಗತ್ತಿಗೆ ಯೋಗದ ಮಹತ್ವದ ಕುರಿತ ಸಂದೇಶ ಬಿತ್ತರವಾಗಲಿದೆ. ಜಗತ್ತಿನಲ್ಲಿ ಭ್ರಾತೃತ್ವ ಮತ್ತು ಒಗ್ಗಟ್ಟು ಹಾಗೂ ಶಾಂತಿ ಸಂದೇಶ ಸಾರುವ ನಿಟ್ಟಿನಲ್ಲಿ ಯೋಗ ಪರಿಣಾಮಕಾರಿಯಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಯೋಗ ಪೂರಕವಾಗಿದೆ’ ಎಂದರು.

‘ಅಮೆರಿಕದಲ್ಲಿ ಸುಮಾರು4 ಕೋಟಿ ಮಂದಿ ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದು ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸಲ್‌ ಜನರಲ್‌ ಸಂದೀಪ್‌ ಚಕ್ರವರ್ತಿ ತಿಳಿಸಿದರು.

‘ಸ್ವಾಮಿ ವಿವೇಕಾನಂದ ಅವರು ನ್ಯೂಯಾರ್ಕ್‌ಗೆ ಆಗಮಿಸಿದ್ದಾಗ ಯೋಗದ ಬಗ್ಗೆ ಪುಸ್ತಕಗಳನ್ನು ಸಹ ಬರೆದಿದ್ದರು. ಇದರಿಂದ ಜಗತ್ತಿನಾದ್ಯಂತ ಯೋಗ ಜನಪ್ರಿಯತೆ ಪಡೆಯಿತು’ ಎಂದು ಹೇಳಿದರು.

ಕ್ಯಾಲಿಫೋರ್ನಿಯಾದ ಬ್ಯೂರೊ ಆಫ್ ಪ್ರೈವೇಟ್ ಪೋಸ್ಟ್ ಸೆಕೆಂಡರಿ ಎಜ್ಯುಕೇಷನ್‌ನಿಂದ ಅನುಮತಿ ದೊರೆತ ಮೂರು ತಿಂಗಳ ಒಳಗೆ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT