ಶುಕ್ರವಾರ, ಡಿಸೆಂಬರ್ 6, 2019
21 °C

ಮಾಧುಸ್ವಾಮಿ ಹೇಳಿಕೆಯಿಂದ ಮುಜುಗರವಾಗಿಲ್ಲ: ಅಶ್ವತ್ಥ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಪೇಟೆ: ‘ಕುರುಬ ಸಮಾಜದ ಶ್ರೀಗಳ ವಿರುದ್ಧ ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆಯಿಂದ ಬಿಜೆಪಿಗೆ ಮುಜುಗರವಾಗಿಲ್ಲ. ತಾಂತ್ರಿಕ ಕಾರಣಗಳಿಂದ ಅವರನ್ನು ಕ್ಷೇತ್ರದ ಉಸ್ತುವಾರಿ ಸ್ಥಾನದಿಂದ ವಿಮುಕ್ತಿಗೊಳಿಸಲಾಗಿದೆ’ ಎಂದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಕೆ.ಆರ್.ಪೇಟೆ ಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ. ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ. ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದ್ದು ಸಮಸ್ಯೆ ಬಗೆಹರಿದಿದೆ. ಮಾಧುಸ್ವಾಮಿ ಅವರ ಬದಲಾವಣೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ’ ಎಂದು ಹೇಳಿದರು.

‘ಕೆ.ಆರ್‌.ಪೇಟೆ ಯಡಿಯೂರಪ್ಪ ಅವರ ಹುಟ್ಟೂರು. ಇಲ್ಲಿಯ ಜನರು ಜಾತಿ, ಧರ್ಮ ಮೀರಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾರಾಯಣಗೌಡರು ರಾಜೀನಾಮೆ ನೀಡಿ ದೊಡ್ಡ ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರನ್ನು ಪಕ್ಷ ಗೌರವಿಸುತ್ತದೆ. ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್‌– ಜೆಡಿಎಸ್‌ ಮುಖಂಡರ ಕಚ್ಚಾಟವೇ ಕಾರಣ. ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಮಾತನಾಡಿ ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಕ್ಕಲಿಗರ ವಿರೋಧಿಯಲ್ಲ. ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಬಿದ್ದ ನಂತರ ಒಕ್ಕಲಿಗರು ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬುದೆಲ್ಲಾ ಸುಳ್ಳು. ಕುಮಾರಸ್ವಾಮಿ ಅವರನ್ನು ಮೊದಲು ಮುಖ್ಯಮಂತ್ರಿ ಮಾಡಿದ್ದೇ ಯಡಿಯೂರಪ್ಪನವರು. ಸದಾನಂದಗೌಡರನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಒಕ್ಕಲಿಗ ಮುಖಂಡರಾದ ಆರ್‌.ಅಶೋಕ್‌, ಅಶ್ವತ್ಥ ನಾರಾಯಣ ಅವರು ಉಪ ಮುಖ್ಯಮಂತ್ರಿಗಳಾಗಿದ್ದಾರೆ’ ಎಂದರು.

‘ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ವರ್ಗಾಯಿಸುವುದು ಯಡಿಯೂರಪ್ಪ ಅವರ ಜಾಯಮಾನವಲ್ಲ. ಅಭಿವೃದ್ಧಿ ಎಂದರೆ ಬಿಎಸ್‌ವೈ. ಸುಳ್ಳು ಆರೋಪ ಮಾಡುವುದೇ ಶಾಸಕ ಎಚ್‌.ಡಿ.ರೇವಣ್ಣ ಅವರ ಜಾಯಮಾನವಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)