ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಗ್ರಾಮಗಳಲ್ಲಿ ‘ಗೋಕುಲ’ ಅಭಿಯಾನ

ಆಕಳು, ಎಮ್ಮೆಗಳಿಗೆ ಕೃತಕ ಗರ್ಭಧಾರಣೆ
Last Updated 3 ಆಗಸ್ಟ್ 2020, 6:13 IST
ಅಕ್ಷರ ಗಾತ್ರ

ಬೆಳಗಾವಿ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಸುಗಳ ತಳಿಗಳನ್ನು ಕೃತಕ ಗರ್ಭಧಾರಣೆ ಮೂಲಕ ಉನ್ನತೀಕರಿಸುವ ‘ರಾಷ್ಟ್ರೀಯ ಗೋಕುಲ ಮಿಷನ್’ಗೆ ಜಿಲ್ಲೆಯ 500 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ.

ರಾಷ್ಟ್ರವ್ಯಾಪಿ ನಡೆಯುತ್ತಿರುವ ಕೃತಕ ಗರ್ಭಧಾರಣೆ ಯೋಜನೆ-2 ಜಿಲ್ಲೆಯಲ್ಲಿ ಆ.1ರಿಂದ ಆರಂಭವಾಗಿದ್ದು 2021ರ ಮೇವರೆಗೆ ನಡೆಯಲಿದೆ. ಇಲ್ಲಿನ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಹಸುವಿಗೆ ಕೃತಕ ಗರ್ಭಧಾರಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಗಿದೆ.

ಏನಿದು ಕಾರ್ಯಕ್ರಮ?

ಯೋಜನೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸರಾಸರಿ 40ರಿಂದ 50 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ, ಈ ಗ್ರಾಮಗಳಲ್ಲಿ ಸ್ಥಳೀಯ ತಳಿಯ 100 ಆಕಳು ಹಾಗೂ ಎಮ್ಮೆಗಳಿಗೆ ಉತ್ಕೃಷ್ಟ ದೇಸಿ ಹಾಗೂ ವಿದೇಶಿ ತಳಿಗಳ ವೀರ್ಯವನ್ನು ಬಳಸಿ ಉಚಿತವಾಗಿ ಕೃತಕ ಗರ್ಭಧಾರಣೆ ಮಾಡಲಾಗುವುದು. ವರ್ಷಕ್ಕೆ 7ಸಾವಿರ ಲೀಟರ್ ಹಾಲು ಕೊಡುವಂತಹ ಸಾಮರ್ಥ್ಯವುಳ್ಳ ಉತ್ಕೃಷ್ಟ ಎಚ್‌ಎಫ್‌ ತಳಿಯಿಂದ ಜನಿಸಿದ ಹೋರಿಯಿಂದ ಸಂಗ್ರಹಿಸಿದ ವೀರ್ಯವನ್ನು ಆಕಳುಗಳಿಗೆ ಮತ್ತು ವರ್ಷಕ್ಕೆ 3ಸಾವಿರ ಲೀಟರ್‌ ಹಾಲು ನೀಡುವಂತಹ ‘ಮುರ್ರಾ’ ಎಮ್ಮೆಯ ತಳಿಯಿಂದ ಜನಿಸಿದ ಕೋಣಗಳ ವೀರ್ಯವನ್ನು ಎಮ್ಮೆಗಳಿಗೆ ಉಚಿತವಾಗಿ ಕೊಡಲಾಗುವುದು.

9 ತಿಂಗಳ ಅಭಿಯಾನ

‘ಅಭಿಯಾನ 9 ತಿಂಗಳವರೆಗೆ ನಡೆಯಲಿದೆ. ಎಮ್ಮೆ ಅಥವಾ ಆಕಳು ತಳಿ ಸಂವರ್ಧನೆಗೆ ಯೋಗ್ಯವಿರುವ ಸಮಯಕ್ಕೆ (ಬೆದೆಗೆ) ಬಂದಾಗ ಸಂತಾನೋತ್ಪತ್ತಿಗಾಗಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಪ್ರಸ್ತುತ ಎಲ್ಲೆಲ್ಲಿ ಪಶು ಆಸ್ಪತ್ರೆಗಳಿವೆಯೋ ಆ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾಂಸ್ಥಿಕವಾಗಿ ನೆರವೇರಿಸಲಾಗುತ್ತಿತ್ತು. ಈಗ, ಈ ಅಭಿಯಾನದಲ್ಲಿ ಇತರ ಹಳ್ಳಿಗಳನ್ನೂ ಒಳಪಡಿಸಲಾಗುತ್ತಿದೆ’ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ ಎಲ್.ಕೊಳ್ಳಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಕಾರ್ಯಕ್ಕಾಗಿ 184 ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಅವರಿಗೆ ಇಂತಿಷ್ಟು ಎಮ್ಮೆ ಹಾಗೂ ಆಕಳುಗಳಿಗೆ ಕೃತಕ ಗರ್ಭಧಾರಣೆ ಕಾರ್ಯ ನಿರ್ವಹಿಸುವಂತೆ ಗುರಿ ನೀಡಲಾಗಿದೆ. ನಿಗದಿತ ಎಮ್ಮೆ ಅಥವಾ ಆಕಳು ಗರ್ಭ ಧರಿಸಿದರೆ ₹ 50 ಹಾಗೂ ಕರು ಜನಿಸಿದರೆ ₹ 100 ಅನ್ನು ಈ ಕಾರ್ಯಕರ್ತರಿಗೆ ಇನ್ಸೆಟಿವ್ ಆಗಿ ಕೊಡಲಾಗುವುದು. ವೀರ್ಯವನ್ನು ಇಲಾಖೆಯ ವಿವಿಧ ಸಂಕಲನ ಕೇಂದ್ರಗಳಿಂದ ತರಲಾಗುವುದು’ ಎಂದು ತಿಳಿಸಿದರು.

ಹಳ್ಳಿಗಳಲ್ಲೆ

‘ಪ್ರಸ್ತುತ ಸಾಂಸ್ಥಿಕವಾಗಿ ಅಂದರೆ ಆಸ್ಪತ್ರೆಗಳ ಮೂಲಕ 3.50 ಲಕ್ಷ ಕೃತಕ ಗರ್ಭಧಾರಣೆಯ ಗುರಿ ಹೊಂದಲಾಗಿದೆ. ಅಭಿಯಾನದಲ್ಲಿ ಹೆಚ್ಚುವರಿಯಾಗಿ 50ಸಾವಿರ ಎಮ್ಮೆ ಹಾಗೂ ಆಕಳುಗಳಿಗೆ ಸೌಲಭ್ಯ ಸಿಗಲಿದೆ. ಅಭಿಯಾನದ ಬಗ್ಗೆ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿದೆ. ಹೈನುಗಾರರು ನೀಡುವ ಮಾಹಿತಿ ಆಧರಿಸಿ ಕೃತಕ ಗರ್ಭಧಾರಣೆ ಕಾರ್ಯಕರ್ತರು ನಿಗದಿತ ಹಳ್ಳಿಗಳಿಗೇ ಹೋಗುತ್ತಾರೆ. ಕಡಿಮೆ ಹಾಲು ಕೊಡುವ ಎಮ್ಮೆ ಹಾಗೂ ಆಕಳುಗಳ ಉತ್ಪಾದಕತೆ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ. ಹಾಲಿನ ಉತ್ಪಾದನೆ ಹೆಚ್ಚಿಸುವ ಮೂಲಕ ಹೈನುಗಾರರ ಆರ್ಥಿಕ ಮಟ್ಟ ಹೆಚ್ಚಿಸುವ ಆಶಯ ಹೊಂದಲಾಗಿದೆ. ಅಭಿಯಾನದ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಹಂತ ಹಂತವಾಗಿ ಅನುದಾನ ನೀಡಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT