ಶುಕ್ರವಾರ, ಜುಲೈ 30, 2021
20 °C

ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ಕಿಡಿ; ಬೇಡಿಕೆ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ 10 ದಿನಗಳಿಂದ ಧರಣಿ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಮೊಂಡುತನವನ್ನು ಬಿಟ್ಟು ಕೂಡಲೇ ಚರ್ಚೆಗೆ ಕರೆದು ಬೇಡಿಕೆ ಈಡೇರಿಸಬೇಕು ಎಅಮದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದಾರೆ. ₹12 ಸಾವಿರ ಗೌರವಧನ ಮತ್ತು ಕೋವಿಡ್ ಹೋರಾಟದಲ್ಲಿ ರಕ್ಷಣೆಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ನೀಡಬೇಕೆಂಬುದಷ್ಟೇ ಬೇಡಿಕೆ. ಆದರೆ, ಸರ್ಕಾರ ಜನವಿರೋಧಿ ನೀತಿಯಿಂದ ಈವರೆಗೆ ನಮ್ಮನ್ನು ಚರ್ಚೆಗೆ ಕರೆದಿಲ್ಲ ಎಂದು ದೂರಿದರು. 

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ಎಲ್ಲ ಕಡೆ ₹ 10 ಸಾವಿರಕ್ಕೆ ಗೌರವಧನ ಹೆಚ್ಚಿಸುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಹಾಗೂ ಬಜೆಟ್ ನಲ್ಲಿ ಮಂಡಿಸುವುದಾಗಿಯೂ ಹೇಳಿದ್ದರು. ಆದರೆ ಈಡೇರಿಸಲಿಲ್ಲ. ಜೊತೆಗೆ ಆನ್ ಲೈನ್ ಪೋರ್ಟಲ್ ಲೋಪದೋಷದ ಹೆಸರಲ್ಲಿ ಸುಮಾರು 15 ತಿಂಗಳ ಹಣ ಬರಲೇ ಇಲ್ಲ. ಕೆಲಸ ಹೆಚ್ಚಿಸಿದರೇ ಹೊರತು ಹೆಚ್ಚಿಗೆ ಹಣ ನೀಡಲಿಲ್ಲ ಎಂದು ದೂರಿದರು.

ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಸಿಕ ₹10 ಸಾವಿರ  ಗೌರವಧನ ನಿಗದಿಪಡಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಸಹ ನಿಗದಿಸಬೇಕು. ಬೇಡಿಕೆ ಈಡೇರುವವರೆಗೆ ಹೋರಾಟ ಮಂದುವರೆಯಲಿದೆ ಎಂದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎ ದೇವದಾಸ್, ಜಿಲ್ಲಾ ಗೌರವಾಧ್ಯಕ್ಷೆ  ಎ.ಶಾಂತಾ, ಕಾರ್ಯದರ್ಶಿ ಗೀತಾ, ರಾಮಕ್ಕ, ರೇಷ್ಮಾ,   ರಾಜೇಶ್ವರಿ, ಅಂಬಿಕಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು