ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಟ್ಟೆಚ್ಚರ: ಬೊಮ್ಮಾಯಿ

ಡ್ರೋನ್‌ ಮೂಲಕ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು
Last Updated 4 ಆಗಸ್ಟ್ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬುಧವಾರ ಭೂಮಿಪೂಜೆ ನಡೆಯಲಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ವಿಧಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್‌ ಮೂಲಕ ನಿಗಾ ವಹಿಸುವುದರ ಜತೆಗೆ, ಪ್ರಾರ್ಥನಾ ಮಂದಿರಗಳಿಗೆ ಬಂದೋಬಸ್ತ್‌ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ವಿಡಿಯೊ ಸಂವಾದದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ನಿಗಾ ವಹಿಸಬೇಕು. ಗಡಿ ಜಿಲ್ಲೆಗಳಾದ ಚಾಮರಾಜನಗರ, ಮಡಿಕೇರಿ, ಬೆಳಗಾವಿ, ಮಂಗಳೂರು, ಕೋಲಾರ, ಕಲಬುರ್ಗಿ ಜಿಲ್ಲೆಗಳ ಗಡಿ ಪೋಸ್ಟ್‌ಗಳಲ್ಲೂ ಸೂಕ್ತ ಬಂದೋಬಸ್ತ್‌ ಮಾಡಿ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದರು.

ರಾಮಜನ್ಮಭೂಮಿ ಕುರಿತಂತೆ ಸುಪ್ರೀಂಕೋರ್ಟ್‌ನ‌ ಆದೇಶ ಪಾಲಿಸುವುದು ಎಲ್ಲ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿ. ಶಿಲಾನ್ಯಾಸ ಮತ್ತು ಭೂಮಿಪೂಜೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಬಾರದು. ಕೋವಿಡ್‌ ಇರುವುದರಿಂದ ಎಲ್ಲರೂ ತಮ್ಮ ಮನೆಗಳು, ದೇವಸ್ಥಾನ ಮತ್ತು ಮಂದಿರಗಳಲ್ಲಿ ಮಾತ್ರ ಅಚರಣೆ ಮಾಡಬಹುದು ಎಂದು ಹೇಳಿದ್ದಾರೆ. ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌‌ ಮೇಲೆ ಕಣ್ಣಿಡಲಾಗುವುದು. ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಮಾಹಿತಿ ಪ್ರಕಟಿಸಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಉಲ್ಲಂಘಿಸುವರ ವಿರುದ್ಧ ಗೂಂಡಾಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT