ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನಾರಚನೆ ತಾಲೀಮು ಶುರು

4–5 ಸಚಿವರಿಗೆ ಕೊಕ್‌ ಸಾಧ್ಯತೆ l ವರಿಷ್ಠರ ಒಪ್ಪಿಗೆಗಾಗಿ ಆಗಸ್ಟ್‌ನಲ್ಲಿ ಯಡಿಯೂರಪ್ಪ ದೆಹಲಿಗೆ
Last Updated 30 ಜುಲೈ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚು ಕ್ರಿಯಾಶೀಲರಲ್ಲದ ಹಾಗೂ ಒಂದು ವರ್ಷದಲ್ಲಿ ನಿರೀಕ್ಷೆಯಷ್ಟು ಸಾಧನೆ ಮಾಡದ 4 ರಿಂದ 5 ಸಚಿವರನ್ನು ಕೈಬಿಟ್ಟು, ಸಂಪುಟ ಪುನಾರಚನೆಗೆ ವರಿಷ್ಠರ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಗಸ್ಟ್ ಎರಡನೇ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

‘ಸಂ‍ಪುಟ ಪುನಾರಚನೆ ಆಗಸ್ಟ್‌ನಲ್ಲೇ ನಡೆಯಲಿದೆ. ಈ ಸಂಬಂಧ ತಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಿ ಹೊಸಬರ ಸೇರ್ಪಡೆಗೆ ಸಿ.ಎಂ ಒಪ್ಪಿಗೆ ಪಡೆಯಲಿದ್ದಾರೆ’ ಎಂದು ಬಿಜೆಪಿಯ ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಂಪುಟ ಪುನಾರಚನೆ ಕಸರತ್ತಿಗೆ ವಿಘ್ನ ಉಂಟಾಗದಿರಲೆಂದು ಈಗಾಗಲೇ ನಿಗಮ– ಮಂಡಳಿಗಳ ಅಧ್ಯಕ್ಷ ಸ್ಥಾನ
ಗಳಿಗೆ ನೇಮಕ ಮಾಡಿರುವ ಯಡಿಯೂರಪ್ಪ, ಸದ್ಯವೇ ಉಳಿದ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಇನ್ನೊಂದು ಸುತ್ತಿನ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ:‘ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಾದೇಶಿಕ ಅಸಮ
ತೋಲನ ಆಗಿತ್ತು. ರಾಜಕೀಯ ಕಾರಣಗಳಿಗೆ ಆಗ ಅದು ಅನಿವಾರ್ಯವಾಗಿತ್ತು. ಈ ಬಾರಿ ಪ್ರಾದೇಶಿಕ ತಾರತಮ್ಯ ಸರಿಪಡಿಸುವ ಕಡೆ ಒತ್ತು ನೀಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳಿಗೆ ಅವಕಾಶ ನೀಡಲಿದ್ದಾರೆ. ಈಗಿನ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರು ನಗರ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಹೀಗಾಗಿ ಈ ಜಿಲ್ಲೆಗಳ
ಒಂದಿಬ್ಬರನ್ನು ಕೈಬಿಡಬಹುದು. ಅಲ್ಲದೆ, ಸರ್ಕಾರಕ್ಕಾಗಲಿ, ಪಕ್ಷದ ಬೆಳವಣಿಗೆಗಾಗಲಿ ಶ್ರಮವೇ ಹಾಕ
ದವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ’ ಎಂದೂ ತಿಳಿಸಿವೆ.

ನಾಲ್ಕೈದು ಸಚಿವರನ್ನು ಕೈಬಿಟ್ಟು ಹೊಸಬರು ಮತ್ತು ಕಠಿಣ ಪರಿಶ್ರಮ ಹಾಕುವವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ವರಿಷ್ಠರು ಈ ಹಿಂದೆಯೇ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು. ಆದರೆ, ಹಿರಿಯರನ್ನು ಕೈಬಿಡುವ ವಿಚಾರದಲ್ಲಿ ಯಡಿಯೂರಪ್ಪ ಕೊಂಚ ಹಿಂದೇಟು ಹಾಕುತ್ತಿದ್ದಾರೆ. ಈಗ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚಿಸಬೇಕಾಗಿರುವುದರಿಂದ ಯಾವ ಯಾವ ಸಚಿವರನ್ನು ಕೈಬಿಡಬೇಕು ಎಂಬ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸುವರು.

‘ಈಗ ಖಾಲಿ ಉಳಿದಿರುವ ಆರು ಸಚಿವ ಸ್ಥಾನಗಳ ಪೈಕಿ ಬಿಜೆಪಿ ಸರ್ಕಾರ ರಚಿಸಲು ನೆರವಿಗೆ ಬಂದಿದ್ದ ಆರ್‌.ಶಂಕರ್‌, ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್‌ ಈ ಮೂವರಲ್ಲಿ ಶಂಕರ್‌ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ. ಉಳಿದ ಇಬ್ಬರ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಇವರಿಬ್ಬರನ್ನು ತೀರಾಕಷ್ಟದಲ್ಲಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೆ ಯಡಿಯೂರಪ್ಪ ಅವರು ಈಗಾಗಲೇ ಹಲವು ಬಾರಿ ಸಚಿವ ಸ್ಥಾನದ ಭರವಸೆ ನೀಡಿರುವುದರಿಂದ ಅವರಿಗೆ ಈ ಬಾರಿ ನಿರಾಸೆಗೊಳಿಸುವುದಿಲ್ಲ. ಕತ್ತಿಯವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಾ
ದರೆ, ಆ ಜಿಲ್ಲೆಯ ಒಬ್ಬ ಸಚಿವರನ್ನು ಕೈಬಿಡುವುದು ಅನಿವಾರ್ಯವಾಗುತ್ತದೆ ಎಂದು ಮೂಲಗಳು ಹೇಳಿವೆ.

*****

ನಿಗಮ–ಮಂಡಳಿ ಕಾರ್ಯಕರ್ತರಿಗೆ ಆದ್ಯತೆ

ಬಾಕಿ ಉಳಿದಿರುವ ನಿಗಮ– ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಶಾಸಕರಿಗೇ ಅವಕಾಶ ನೀಡಲಾಗಿತ್ತು. ಇದರಿಂದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಅವರು ನಿಗಮ, ಮಂಡಳಿಗಳ ನೇಮಕಕ್ಕಾಗಿ ಕಾರ್ಯಕರ್ತರ ಪಟ್ಟಿಯೊಂದನ್ನು ನೀಡಿದ್ದರು. ಈಗ ಆ ಹೆಸರುಗಳನ್ನು ಮುಂದಿಟ್ಟುಕೊಂಡು ಅವರಿಗೆ ಅವಕಾಶ ಕಲ್ಪಿಸಲು ಪಟ್ಟಿ ತಯಾರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ವಾರ 20 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆ ಪೈಕಿ ಕೆಲವರು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇನ್ನು ಕೆಲವರು ಮಂತ್ರಿ ಸ್ಥಾನಕ್ಕಾಗಿ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರೆ.

***

ಎಸ್‍‌ಸಿ ಬಲಗೈಗೆ ಅನ್ಯಾಯ:ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

‘ಸಚಿವ ಸ್ಥಾನ ನೀಡುವಾಗ ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯರಾಗಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೋವು ತೋಡಿಕೊಂಡಿದ್ದಾರೆ.

‘ನಮ್ಮ ಸಮುದಾಯದಿಂದ ನೆಹರು ಓಲೇಕಾರ, ನಾನು ಹಾಗೂ ಹರ್ಷವರ್ಧನ ಗೆದ್ದಿದ್ದೇವೆ. ಇಂತಹವರಿಗೇ ಕೊಡಿ ಎಂದು ನಾನು ಒತ್ತಾಯಿಸುವುದಿಲ್ಲ. ನಮ್ಮಲ್ಲಿ ಯಾರಿಗಾದರೂ ಕೊಡುವವರೆಗೆ ನನಗೆ ನೀಡಿರುವ ಮಂಡಳಿಯ ಅಧ್ಯಕ್ಷ ಸ್ಥಾನ ಸ್ವೀಕರಿಸದೇ ಇರುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷ ಹಾಗೂ ಯಡಿಯೂರಪ್ಪನವರ ಬಗ್ಗೆ ತಕರಾರಿಲ್ಲ. ಪಕ್ಷ ನಿಷ್ಠೆ ನಮ್ಮದು. ನಮ್ಮ ಸಮುದಾಯವರು ಚುನಾವಣೆಯಲ್ಲಿ ಬಿಜೆಪಿ ಪರ ನಿಂತರೂ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೊರಗು ನಮ್ಮದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT