ಭಾನುವಾರ, ಆಗಸ್ಟ್ 1, 2021
27 °C
‘ಮಾತು ಕೇಳದಿದ್ದರೆ ಖಾಸಗಿ ಆಸ್ಪತ್ರೆಗಳ ಖಡಕ್‌ ಕ್ರಮ ತೆಗೆದುಕೊಳ್ಳಿ’ ಮುಖ್ಯಮಂತ್ರಿ ತಾಕೀತು

ಕೋವಿಡ್‌-19 | ಖಾಸಗಿ ಆಸ್ಪತ್ರೆಗಳ ವಿರುದ್ಧ ಗುಡುಗಿದ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಸಂಬಂಧ ಖಾಸಗಿ ಆಸ್ಪತ್ರೆಗಳು ಮಾತು ಕೇಳದಿದ್ದರೆ, ವಿದ್ಯುತ್‌, ನೀರಿನ ಸಂಪರ್ಕ ಕಿತ್ತು ಹಾಕಿ. ಅವರನ್ನು ಓಲೈಸಿಕೊಂಡು, ಪಾದ ಪೂಜೆ ಮಾಡಿಕೊಂಡಿರಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ‌ ಸಭೆಯಲ್ಲಿ ಅವರು, ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಯ ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ಹೊರಹಾಕಿದರು. ‘ಈ ತಿಂಗಳ ಕೊನೆಯ ಒಳಗೆ ಕೋವಿಡ್‌ ನಿಯಂತ್ರಣಕ್ಕೆ ತರಬೇಕು. ಯಾವುದೇ ಸಮಜಾಯಿಷಿಗಳು ಬೇಡ’ ಎಂದೂ ಗಡುವು ನೀಡಿದರು.

‘ಎಷ್ಟು ದಿನ ಅಂತ ಅವರಿಗೆ ನೋಟಿಸ್‌ ಕೊಟ್ಟು ಕಾಯುತ್ತಾ ಕುಳಿತುಕೊಂಡಿರುತ್ತೀರಿ? 24 ಗಂಟೆಗಳಲ್ಲಿ ಉತ್ತರಿಸಿಲ್ಲ ಎಂದರೆ, ಎಷ್ಟೇ ದೊಡ್ಡವರಿರಲಿ ಕ್ರಮ ತೆಗೆದುಕೊಳ್ಳಿ. ನೀವು ಆ ಕೆಲಸ ಮಾಡದಿದ್ದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು.

‘ಖಾಸಗಿ ಆಸ್ಪತ್ರೆಯವರಿಗೆ ಹಾಸಿಗೆ ಕೊಡಿ ಎಂದು ಗೋಗರೆಯುತ್ತಾ ಕೂರಲು ಆಗುತ್ತಾ? ಇಂತಹ ತುರ್ತು ಸಂದರ್ಭದಲ್ಲಿ ಅವರ ಓಲೈಕೆ ಮಾಡಿಕೊಂಡು ಯಾಕೆ ಕುಳಿತಿದ್ದೀರಿ. ಅಂಗಲಾಚುವುದನ್ನು ನಿಲ್ಲಿಸಿ, ನಿಮ್ಮ ಅಧಿಕಾರ ಚಲಾಯಿಸಿ’ ಎಂದರು.

‘ಮೂರು– ನಾಲ್ಕು ತಿಂಗಳಿಂದ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದೇನೆ. ಇನ್ನು ಸಭೆ ಮಾಡಲ್ಲ. ಮುಂದಿನ ಸಭೆ ಒಳಗೆ ಕೋವಿಡ್‌ ಕಡಿಮೆ ಆಗಬೇಕು ಅಷ್ಟೇ. ರಾಜ್ಯದಲ್ಲಿ ರೋಗಿಗಳು ನರಳುವಂತಾಗಬಾರದು. ಮುಖ್ಯಮಂತ್ರಿ ಮಾತುಗಳನ್ನು ಅನುಸರಣೆ ಮಾಡೋದಿಲ್ಲ ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಆಂಬುಲೆನ್ಸ್‌ಗಳನ್ನು ಯಾಕೆ ಹೊಂದಿಸಲು ಆಗುತ್ತಿಲ್ಲ. ಇದಕ್ಕೆ ಎಷ್ಟು ದಿನಗಳು ಬೇಕು. 15 ದಿನಗಳಿಂದ ಇದರ ಬಗ್ಗೆ ಚರ್ಚೆ ಮಾಡುತ್ತಲೇ ಬಂದಿದ್ದೇವೆ. ಎಲ್ಲಿದೆ ಆಂಬುಲೆನ್ಸ್‌, ಯಾಕೆ ಖರೀದಿ ಆಗಿಲ್ಲ. ಫಾಲೋಅಪ್‌ ಯಾಕೆ ಮಾಡುತ್ತಿಲ್ಲ’ ಎಂದು ಯಡಿಯೂರಪ್ಪ ಗರಂ ಆದರು.

‘ನೀವು ಕಟ್ಟುನಿಟ್ಟಾಗಿ ವರ್ತಿಸದ ಕಾರಣ, ಅವ್ಯವಸ್ಥೆ ಆಗುತ್ತಿದೆ. ಆರೋಪಗಳು ಕೇಳಿ ಬರುತ್ತಿವೆ. ಪಾರದರ್ಶಕವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಿ. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಉಪಕರಣಗಳು, ಸೌಲಭ್ಯಗಳಿಗೆ ವ್ಯವಸ್ಥೆ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು